ಜೈಪುರ: ರಕ್ಷ ಣಾತ್ಮಕ ಆಟಕ್ಕೆ ಸಾಕ್ಷಿಯಾದ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜಯಂಟ್ಸ್ ನಡುವಿನ ಹೈವೋಲ್ಟೇಜ್ ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಬುಲ್ಸ್ ತಂಡ 4 ಅಂಕಗಳಿಂದ ಜಯಭೇರಿ ಬಾರಿಸಿತು.

ಇಲ್ಲಿನ ಎಸ್‌ಎಂಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಬೆಂಗಳೂರು ತಂಡ 28-24 ಅಂಕಗಳಿಂದ ಗುಜರಾತ್‌ಗೆ ಸೋಲುಣಿಸಿತು. ಇದರೊಂದಿಗೆ ಹಿಂದಿನ ಸೋಲಿನಿಂದ ಗೆಲುವಿನ ಹಾದಿಗೆ ಮರಳಿದ ಯೋಗೇಶ್ ಸಾರಥ್ಯದ ಬುಲ್ಸ್, ಒಟ್ಟು ಹತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತಷ್ಟು ಮೇಲೇರಿತು. ಅತ್ತ ಸಂಘಟಿತ ಹೋರಾಟ ನೀಡುವಲ್ಲಿ ಮತ್ತೊಮ್ಮೆ ವಿಫಲಗೊಂಡ ಗುಜರಾತ್ 6ನೇ ಸೋಲಿಗೆ ಗುರಿಯಾಗಿ 12 ತಂಡಗಳ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಸಿಮೀತಗೊಂಡಿತು.

ಬೆಂಗಳೂರು ಬುಲ್ಸ್ ತಂಡದ ಪರ ಆಕಾಶ್ ಶಿಂದೆ (7 ಅಂಕ), ಯೋಗೇಶ್(6 ಅಂಕ), ದೀಪಕ್ ಶಂಕರ್(4 ಅಂಕ) ಮತ್ತು ಆಶೀಶ್ ಮಲಿಕ್(4 ಅಂಕ) ಗಮನ ಸೆಳೆದರು. ಬುಲ್ಸ್‌ನ ಹಿಂದಿನ ಎಲ್ಲಾ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆಲ್ ರೌಂಡರ್ ಅಲಿರೇಜಾ ಮಿರ್ಜಾಯಿನ್, ಕೇವಲ ಮೂರು ಅಂಕಗಳಿಗೆ ಸಿಮೀತರಾದರು. ಅತ್ತ ಗುಜರಾತ್ ಪರ ವಿಶ್ವನಾಥ್ ಮತ್ತು ಲಕ್ಕಿ ಶರ್ಮ ತಲಾ 5 ಅಂಕ ಗಳಿಸಿದರೆ, ಪರ್ತೀಕ್, ಶುಭಂ ಮತ್ತು ರಾಕೇಶ್ ತಲಾ ನಾಲ್ಕು ಅಂಕ ಗಳಿಸಿ ತಂಡದ ಹೋರಾಟಕ್ಕೆ ಬೆಂಬಲ ನೀಡಿದರು.

ಮೊದಲಾರ್ಧದಲ್ಲಿ ಲಭಿಸಿದ ನಾಲ್ಕು ಅಂಕಗಳ ಮುನ್ನಡೆಯ ವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬೆಂಗಳೂರು, ಸ್ಥಿರ ಪ್ರದರ್ಶನ ಕಾಯ್ದುಕೊಂಡಿದು. ಯಾವುದೇ ಹಂತದಲ್ಲೂ ಎದುರಾಳಿಗೆ ಮುನ್ನಡೆ ಬಿಟ್ಟುಕೊಡದೆ ಪ್ರಾಬಲ್ಯ ಸಾಧಿಸಿದ ಬುಲ್ಸ್ ಆಟಗಾರರು ಕೊನೆಯ ಕ್ಷಣದಲ್ಲಿ ಪ್ರತಿರೋಧ ಎದುರಿಸಿದರೂ ಮೇಲುಗೈ ಸಾಧಿಸುವಲ್ಲಿ ಸಫಲರಾದರು. 2ನೇ ಅವಧಿಯಲ್ಲಿ ರೇಡಿಂಗ್‌ನಲ್ಲಿ ವಿಫಲಗೊಂಡ ಬುಲ್ಸ್ ಟ್ಯಾಕಲ್‌ನಲ್ಲಿ 8 ಅಂಕಗಳನ್ನು ಗಳಿಸಿತು. ಇದಕ್ಕೂ ಮುನ್ನ ಟ್ಯಾಕಲ್‌ನಲ್ಲಿ 6 ಮತ್ತು ರೇಡಿಂಗ್‌ನಲ್ಲಿ 10 ಅಂಕಗಳು ಸೇರಿ 17 ಅಂಕಗಳನ್ನು ಸಂಪಾದಿಸಿದ ಬುಲ್ಸ್, ಎದುರಾಳಿಗಿಂತ ಎಲ್ಲಾದರಲ್ಲೂ ಪ್ರಭುತ್ವ ಸಾಧಿಸಿತು.

ಇದಕ್ಕೂ ಮುನ್ನ ಮೊದಲಾರ್ಧದ ಮುಕ್ತಾಯಕ್ಕೆ ಆರಂಭಿಕ ಹಿನ್ನಡೆಯ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ 17-13ರಲ್ಲಿಮುನ್ನಡೆ ಕಂಡುಕೊಳ್ಳುವ ಮೂಲಕ ಗುಜರಾತ್ ಜಯಂಟ್ಸ್ ವಿರುದ್ಧ ಹಿಡಿತ ಸಾಧಿಸಿತು.

ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿದ ಕಾರಣ ಉಭಯ ತಂಡಗಳ ರೇಡರ್‌ಗಳು ಪಾಯಿಂಟ್ಸ್ ಕಲೆಹಾಕಲು ತಿಣುಕಾಡಿದರು. ಮೊದಲ ಐದು ನಿಮಿಷದ ಅಂತ್ಯಕ್ಕೆ 6-5ರಲ್ಲಿ ಅಲ್ಪ ಮುನ್ನಡೆ ಸಾಧಿಸಿದ ಗುಜರಾತ್, ಬುಲ್ಸ್‌ನ ಪ್ರತಿರೋಧದಿಂದ ಬೆಚ್ಚಿ ಬಿದ್ದಿತು. ಟ್ಯಾಕಲ್ ಮತ್ತು ರೇಡಿಂಗ್ ಎರಡು ವಿಭಾಗಗಳಲ್ಲಿ ಮಿಂಚಿದ ಬುಲ್ಸ್ ನಿಯಮಿತವಾಗಿ ಮೇಲುಗೈ ಸಾಧಿಸಿ ಎದುರಾಳಿ ತಂಡದ ಮೇಲೆ ಒತ್ತಡ ಸಾಧಿಸಿತು. ರೇಡರ್ ಆಕಾಶ್ ಶಿಂದೆ, ನಾಯಕ ಯೋಗೇಶ್ ಮತ್ತು ದೀಪಕ್ ಶಂಕರ್ ತಂಡದ ಮುನ್ನಡೆಗೆ ಶ್ರಮಿಸಿದರು.

ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸೆಪ್ಟೆಂಬರ್ 25ರಂದು ಯು.ಪಿ. ಯೋಧಾಸ್ ತಂಡದ ಸವಾಲು ಎದುರಿಸಲಿದೆ.