ಬೆಂಗಳೂರು: ದೇಶದ ರೈತರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಪ್ರತಿ ವರ್ಷ ದೇಶದ 9 ಕೋಟಿ ರೈತರಿಗೆ 6 ಸಾವಿರ ರೂಪಾಯಿ ನೀಡಲಾಗುತ್ತದೆ. ವರ್ಷದಲ್ಲಿ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂಪಾಯಿ ನೀಡಲಾಗುತ್ತದೆ. ಈಗ ಕೇಂದ್ರ ಸರ್ಕಾರವು ವರ್ಷಕ್ಕೆ 6 ಸಾವಿರ ರೂ. ಬದಲು 8 ಸಾವಿರ ರೂ. ನೀಡಲಿದೆ ಎಂದು ಹೇಳಲಾಗುತ್ತಿದೆ.
ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಬಜೆಟ್ ಮಂಡಿಸಲಿದ್ದು, ರೈತರಿಗೆ ಸಿಹಿ ಸುದ್ದಿ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅದರಂತೆ, ಕೇಂದ್ರ ಸರ್ಕಾರವು ಘೋಷಣೆ ಮಾಡಿದರೆ, ವರ್ಷದಲ್ಲಿ 4 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ರೈತರ ಖಾತೆಗೆ 8 ಸಾವಿರ ರೂಪಾಯಿ ಜಮೆಯಾಗಲಿದೆ.
ಕಳೆದ ಕೆಲವು ವರ್ಷಗಳಲ್ಲಿ ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಡೀಸೆಲ್, ವಿದ್ಯುತ್, ನೀರಾವರಿ ಮತ್ತು ಕೃಷಿ ಉಪಕರಣಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ರೈತರಿಗೆ 6,000 ರೂಪಾಯಿ ನೆರವಿನಿಂದ ವರ್ಷಪೂರ್ತಿ ಅಗತ್ಯಗಳನ್ನು ಪೂರೈಸುವುದು ಕಷ್ಟಕರವಾಗುತ್ತಿದೆ.
ಹಾಗಾಗಿ, ಸರ್ಕಾರವು ಈ ಯೋಜನೆಯ ಮೊತ್ತವನ್ನು ಹೆಚ್ಚಿಸಿದರೆ, ಅದು ರೈತರಿಗೆ ಕೃಷಿಯಲ್ಲಿ ತೊಡಗಲು ಹೊಸ ಉತ್ಸಾಹ ಬರುತ್ತದೆ. ಹಾಗೆಯೇ, ಸಾಲದ ಮೇಲಿನ ಅವರ ಅವಲಂಬನೆಯನ್ನು ಕೂಡ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಲ್ಲದು ಹೇಳಲಾಗುತ್ತಿದೆ. ಸದ್ಯ ರೈತರು, ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರವು ಫೆಬ್ರವರಿಯಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ರಾಜ್ಯ ಸರ್ಕಾರದ KSRLPS 11 ಬ್ಲಾಕ್ ಮ್ಯಾನೇಜರ್ ಹುದ್ದೆಗಳು ಖಾಲಿ | ಹೀಗೆ ಅರ್ಜಿ ಸಲ್ಲಿಸಿ



















