ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಕಡೆಯಿಂದ ಹಲವು ವರ್ಷಗಳ ಬಳಿಕ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಡಿಸೆಂಬರ್ ತಿಂಗಳಿಗೆ ಅಂತ್ಯಗೊಂಡ 2024-25ರ 3ನೇ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್ 262 ಕೋಟಿ ರೂ. ಲಾಭ ಗಳಿಸಿದೆ. ಈ ಮೂಲಕ ಸುಮಾರು 17 ವರ್ಷಗಳ ಬಳಿಕ ಮೊದಲ ಬಾರಿಗೆ ಸಂಸ್ಥೆಯು ಲಾಭವನ್ನು ನೋಡಿದಂತಾಗಿದೆ. ಈ ವಿಚಾರವನ್ನು ಸ್ವತಃ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಹೇಳಿದ್ದು, ಸಂಸ್ಥೆಯ ಸಾಧನೆಯನ್ನು ಕೊಂಡಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ತನ್ನ ವೆಯನ್ನು ವಿಸ್ತರಣೆ ಮಾಡಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಚಂದಾದಾರರ ಸಂಖ್ಯೆ ಹೆಚ್ಚಳವಾದ ಕಾರಣ ಕಂಪನಿಯು ಲಾಭದ ಹಾದಿಗೆ ಮರಳಿದೆ. ಇದರ ಜೊತೆಗೆ, ವೆಚ್ಚ ಕಡಿತದ ವಿಚಾರದಲ್ಲೂ ಸಂಸ್ಥೆ ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದು, ಭಾರೀ ಪ್ರಮಾಣದಲ್ಲಿ ವೆಚ್ಚವನ್ನೂ ತಗ್ಗಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತನಗಾದ ನಷ್ಟದಲ್ಲಿ 1800 ಕೋಟಿ ರೂ. ಕಡಿಮೆ ಮಾಡಿದೆ ಎಂದೂ ಸಚಿವರು ಟ್ವೀಟ್ ಮಾಡಿದ್ದಾರೆ.
‘ಫೈಬರ್ ಟು ದ ಹೋಮ್’ ವ್ಯವಸ್ಥೆಯನ್ನು ಬಿಎಸ್‌ಎನ್‌ಎಲ್ ಜಾರಿಗೆ ತಂದ ಬಳಿಕ ಕಂಪನಿಯ ಆದಾಯದಲ್ಲಿ ಶೇಕಡಾ 14 ರಿಂದ 18ರಷ್ಟು ಏರಿಕೆಯಾಗಿದೆ. ಇತ್ತೀಚೆಗೆ ಬಿಎಸ್‌ಎನ್‌ಎಲ್ 4ಜಿಗೆ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದ್ದು, ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಯೋಜಿಸಲಾಗಿದ್ದ 1 ಲಕ್ಷದಲ್ಲಿ 75000 ಟವರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಕಂಪನಿ ಹೇಳಿದೆ. ಅಲ್ಲದೇ ಕಳೆದ ವರ್ಷ ಚಂದಾದಾರರ ಸಂಖ್ಯೆ 8.4 ಕೋಟಿಯಿಂದ 9 ಕೋಟಿಗೆ ಏರಿಕೆ ಕಂಡಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಬಿಎಸ್‌ಎನ್‌ಎಲ್‌ಗೆ 6 ಸಾವಿರ ಕೋಟಿ ರೂ.ಗಳ ಆರ್ಥಿಕ ನೆರವು ಒದಗಿಸಿತ್ತು. ಅಲ್ಲದೆ ಖಾಸಗಿ ದೂರಸಂಪರ್ಕ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಮತ್ತಿತರ ಕಂಪನಿಗಳು ಶುಲ್ಕ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಹೊರೆ ಉಂಟುಮಾಡಿದ್ದವು. ಇದರ ಬೆನ್ನಲ್ಲೇ ಬಿಎಸ್‌ಎನ್‌ಎಲ್ ತನ್ನ ನೆಟ್‌ವರ್ಕ್ ಬಳಸುವವರಿಗೆ ಹಲವು ಆಫರ್‌ಗಳನ್ನು ಘೋಷಿಸಿತ್ತು. ಈ ಸ್ಪರ್ಧಾತ್ಮಕ ನಿರ್ಧಾರದಿಂದಾಗಿ ಮತ್ತೆ ಗ್ರಾಹಕರು ಸರ್ಕಾರಿ ಸ್ವಾಮ್ಯದ ಸಂಸ್ಥೆಯತ್ತ ವಾಲಿದರು. ಇದೆಲ್ಲದರ ಪರಿಣಾಮವೆಂಬಂತೆ, 17 ವರ್ಷಗಳ ಬಳಿಕ ಸಂಸ್ಥೆಯು ಲಾಭದ ಹಾದಿಗೆ ಮರಳಿದೆ.