ಬೆಂಗಳೂರು: ದೇಶದ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಯಾಗಿರುವ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಇತ್ತೀಚೆಗೆ ಹಲವು ಆಫರ್ ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ದೇಶಾದ್ಯಂತ ಉತ್ತಮ ನೆಟ್ ವರ್ಕ್, 4 ಜಿ ಇಂಟರ್ ನೆಟ್ ಹೊಂದಿರುವ ಬಿಎಸ್ ಎನ್ ಎಲ್ ಈಗ 251 ರೂಪಾಯಿಗೆ 100 ಜಿಬಿ ಇಂಟರ್ ನೆಟ್ ಇರುವ ಭರ್ಜರಿ ಆಫರ್ ಘೋಷಣೆ ಮಾಡಿದೆ. ಇದು ವಿದ್ಯಾರ್ಥಿಗಳಿಗೆಂದೇ ನೀಡಿರುವ ಆಫರ್ ಆಗಿದೆ.
ಹೌದು, ನವೆಂಬರ್ 14ರ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ “ಸ್ಪೆಷಲ್ ಸ್ಟುಡೆಂಟ್ ಆಫರ್” ಘೋಷಣೆ ಮಾಡಲಾಗಿದೆ. 251 ರೂಪಾಯಿ ರಿಚಾರ್ಜ್ ಮಾಡಿದರೆ 100 ಜಿಬಿ ಇಂಟರ್ ನೆಟ್, ಅನ್ ಲಿಮಿಟೆಡ್ ಕರೆ ಮಾಡುವ ಸೌಲಭ್ಯ ಸಿಗಲಿದೆ. ಇದು 28 ದಿನಗಳವರೆಗೆ ಇಂಟರ್ ನೆಟ್, ಉಚಿತ ಕರೆಗಳ ಸೌಲಭ್ಯಗಳನ್ನು ನೀಡುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ, ಅವರು ಇಂಟರ್ ನೆಟ್ ಬಳಸಿ ಉತ್ತಮವಾಗಿ ಅಧ್ಯಯನ ಮಾಡಲಿ ಎಂದು ಆಫರ್ ನೀಡಲಾಗಿದೆ.
2025ರ ನವೆಂಬರ್ 14 ರಂದು ಪ್ರಾರಂಭಿಸಲಾದ ಈ ಸ್ಟೂಡೆಂಟ್ ಸ್ಪೆಷಲ್ ಪ್ಲಾನ್ 2025ರ ಡಿಸೆಂಬರ್ 14ರವರೆಗೆ ಮಾತ್ರ ಲಭ್ಯವಿರುತ್ತದೆ. ಈ ದಿನಾಂಕದೊಳಗೆ ರಿಚಾರ್ಜ್ ಮಾಡುವವರಿಗೆ ಮಾತ್ರ 28 ದಿನಗಳ ವ್ಯಾಲಿಡಿಟಿಯೊಂದಿಗೆ 100 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳು ಸಿಗುತ್ತವೆ. ಪರೀಕ್ಷೆಗಳ ಅವಧಿ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ ಕೊನೆಯಲ್ಲಿ ಜಿಯೋ, ಭಾರ್ತಿ ಏರ್ ಟೆಲ್ ಸೇರಿ ಹಲವು ಸಂಸ್ಥೆಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಲಿವೆ ಎಂದು ಹೇಳಲಾಗುತ್ತಿದೆ. ರಿಚಾರ್ಜ್ ಬೆಲೆಯಲ್ಲಿ ಶೇ.10ರಷ್ಟು ಏರಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ, ಬಿಎಸ್ ಎನ್ ಎಲ್ ಕಡಿಮೆ ಬೆಲೆಗೆ ಉತ್ತಮ ಸೇವೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಬೀದರ್ | ಸಹಖೈದಿಗಳ ಕಿರುಕುಳಕ್ಕೆ ಬೇಸತ್ತು ವಿಚಾರಣಾಧೀನ ಖೈದಿ ಆತ್ಮಹತ್ಯೆ


















