ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಹವಾ ದಿನೇದಿನೆ ಜೋರಾಗುತ್ತಿದೆ. ಬೇಸಿಗೆಯ ಬಿಸಿಲಿಗಿಂತ ಐಪಿಎಲ್ ಕಾವೇ ಜೋರಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸಂಚಾರ ನಿಗಮ ಲಿಮಿಟೆಡ್ (BSNL) ಆಕರ್ಷಕ ಯೋಜನೆಯೊಂದನ್ನು ಪರಿಚಯಿಸಿದೆ. ಐಪಿಎಲ್ ಪಂದ್ಯಗಳನ್ನು ಮೊಬೈಲ್ ನಲ್ಲೇ ವೀಕ್ಷಿಸುವ ದೃಷ್ಟಿಯಿಂದ ಗ್ರಾಹಕರಿಗೆ ಇಂಟರ್ ನೆಟ್ ಯೋಜನೆ ಪರಿಚಯಿಸಿದೆ.
ಬಿಎಸ್ಎನ್ಎಲ್ 251 ರೂ. ರೀಚಾರ್ಜ್ ವೋಚರ್ ಬಳಕೆದಾರರಿಗೆ ಒಟ್ಟು 251GB ಹೈ ಸ್ಪೀಡ್ ಡೇಟಾವನ್ನು ನೀಡುತ್ತದೆ. ಇದು 60 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಅಂದರೆ ಪ್ರತಿದಿನ ಸರಾಸರಿ 4ಜಿಬಿ ಡೇಟಾವನ್ನು ನೀವು ಬಳಸಬಹುದು. 251ಜಿಬಿ ಮಿತಿಯನ್ನು ತಲುಪಿದ ಬಳಿಕ, ಇಂಟರ್ ನೆಟ್ ವೇಗವು 40 ಕೆಬಿಪಿಎಸ್ ಗೆ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಬ್ರೌಸಿಂಗ್ ಅನ್ನು ಅನುಮತಿಸುತ್ತದೆ. ಆದರೆ, ವಿಡಿಯೊ ಸ್ಟ್ರೀಮಿಂಗ್ ಅಥವಾ ಹೆಚ್ಚು ಡೇಟಾ ಬಯಸುವ ಡೌನ್ಲೋಡ್ ಕಷ್ಟಕರವಾಗಿದೆ.
ರೀಚಾರ್ಜ್ ವೋಚರ್ ಡೇಟಾಗೆ ಮಾತ್ರ ಸೀಮಿತವಾಗಿದೆ. ಇದರಲ್ಲಿ ಧ್ವನಿ ಕರೆಗಳು ಅಥವಾ ಎಸ್ ಎಂ ಎಸ್ ಸೇವೆ ಇರುವುದಿಲ್ಲ. ಇದು ಡೇಟಾ ಆ್ಯಡ್ ಆನ್ ವೋಚರ್ ಆಗಿದೆ. ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ಬಳಕೆದಾರರ ಅಸ್ತಿತ್ವದಲ್ಲಿರುವ ಮೂಲ ಯೋಜನೆ ಸಕ್ರಿಯವಾಗಿದ್ದರೆ ಮಾತ್ರ, ಈ ಹೊಸ ಯೋಜನೆಯ ಲಾಭ ಪಡೆಯಬಹುದು.
ಜಿಯೋಸಿನಿಮಾ, ಹಾಟ್ಸ್ಟಾರ್ ಮುಂತಾದ ಒಟಿಟಿ (OTT) ಪ್ಲಾಟ್ ಫಾರ್ಮ್ ಗಳಲ್ಲಿ ಲೈವ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುವ ಬಳಕೆದಾರರಿಗೆ ಇದು ಉತ್ತಮ ಎಂದೇ ಹೇಳಲಾಗುತ್ತಿದೆ. ಬಿ ಎಸ್ ಎನ್ ಎಲ್ ನ ಈ ಹೊಸ ಐಪಿಎಲ್ 251 ವೋಚರ್ ಅನ್ನು ಕಂಪನಿಯ (BSNL) ಅಧಿಕೃತ ವೆಬ್ಸೈಟ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದು. ಇದಲ್ಲದೆ ಮೊಬೈಲ್ ಆ್ಯಪ್ ಅಥವಾ ಯಾವುದೇ ಅಧಿಕೃತ ಚಿಲ್ಲರೆ ವ್ಯಾಪಾರಿಗಳಿಂದಲೂ ರಿಚಾರ್ಜ್ ಮಾಡಿಸಿಕೊಳ್ಳಬಹುದು.