ಬೆಂಗಳೂರು: ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು, ನಾವೂ ದೇಶ ಸೇವೆ ಮಾಡಬೇಕು ಎಂದು ಬಯಸುತ್ತಿರುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಗಡಿ ಭದ್ರತಾ ಪಡೆಯಲ್ಲಿ (BSF Recruitment 2025) ಖಾಲಿ ಇರುವ 3,588 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿಎಸ್ ಎಫ್ ಕಾನ್ ಸ್ಟೆಬಲ್ (ಟ್ರೇಡ್ಸ್ ಮನ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಜುಲೈ 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಗಸ್ಟ್ 25 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ:
ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ
ಒಟ್ಟು ಹುದ್ದೆಗಳು: 3,588
ಸಂಬಳ: 21,700-69,100 ರೂಪಾಯಿ
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಬಿಎಸ್ಎಫ್ ಒಟ್ಟು 3,588 ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಒಟ್ಟು ಹುದ್ದೆಗಳಲ್ಲಿ 3,406 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಮತ್ತು 182 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಅರ್ಜಿದಾರರ ವಯಸ್ಸು 18 ವರ್ಷದಿಂದ 25 ವರ್ಷಗಳ ನಡುವೆ ಇರಬೇಕು. ಒಬಿಸಿ ವರ್ಗಕ್ಕೆ 3 ವರ್ಷ ಮತ್ತು ಎಸ್ಸಿ ಮತ್ತು ಎಸ್ಟಿ ವರ್ಗದ ಅರ್ಜಿದಾರರಿಗೆ 5 ವರ್ಷಗಳ ವಯೋಮಿತಿ ಇದೆ.
ನೇಮಕಾತಿ ಹೇಗೆ?
ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಜನರಲ್, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವಿದೆ. ಉಳಿದ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ನೇಮಕಾತಿ ಹೊಂದಿದವರಿಗೆ 21,700-69,100 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು bsf.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.