ವಡಗೇರ, ಮಾ.14: ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಳ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ವೃದ್ಧನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
76 ವರ್ಷದ ಹಂಪಣ್ಣ ಸಜ್ಜನ ಕೊಲೆಯಾದ ದುರ್ದೈವಿ. ಹಂಪಣ್ಣ ಅವರಿಗೆ ಮೂವರು ಗಂಡು ಮಕ್ಕಳು ಇದ್ದು, ಸುಮಾರು 15 ವರ್ಷಗಳ ಹಿಂದೆ ಆಸ್ತಿ ಹಂಚಿಕೆ ಮಾಡಿ ತನಗಾಗಿ 12 ಎಕರೆ ಜಮೀನು ಉಳಿಸಿಕೊಂಡಿದ್ದರು. ಸುಮಾರು 12 ವರ್ಷಗಳ ಹಿಂದೆ ಪತ್ನಿ ನಿಧನರಾದ ಬಳಿಕ, ಮಕ್ಕಳು ಗ್ರಾಮದಲ್ಲೇ ವಾಸಿಸುತ್ತಿದ್ದರೂ ಹಂಪಣ್ಣ ಅವರು ತಮ್ಮ ಜಮೀನಿನಲ್ಲಿ ಪುಟ್ಟ ಮನೆ ಕಟ್ಟಿಕೊಂಡು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು.
ನಿನ್ನೆ ರಾತ್ರಿ ದುಷ್ಕರ್ಮಿಗಳು ಹಂಪಣ್ಣ ಮಲಗಿದ್ದ ವೇಳೆ ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇಂದು ಮುಂಜಾನೆ ಗ್ರಾಮಕ್ಕೆ ಹಾಲು ಪಡೆಯಲು ಹಂಪಣ್ಣ ಬರದಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಜಮೀನಿಗೆ ತೆರಳಿ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ವಡಗೇರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ಹಂಪಣ್ಣ ಅವರು ಪರಸ್ತ್ರೀಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸಿ ದುಷ್ಕರ್ಮಿಗಳು ಹತ್ಯೆ ನಡೆಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮೈಸೂರು | ಫಾರಂಹೌಸ್‌ಗೆ ನುಗ್ಗಿ ನಾಯಿ ಮೇಲೆ ಚಿರತೆ ಅಟ್ಯಾಕ್!



















