ದೇವೂರಿಯಾ (ಉತ್ತರ ಪ್ರದೇಶ) : ಯಾವುದಾದರೂ ಒಂದು ವಸ್ತುವಿನ ಮೇಲಿನ ಮೋಹ ಮನುಷ್ಯನನ್ನು ಯಾವ ಹಂತಕ್ಕೆ ಒಯ್ಯುತ್ತದೆ ಎನ್ನುವುದಕ್ಕೆ ಉತ್ತರ ಪ್ರದೇಶದ ದೇವೂರಿಯಾ ನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮೊಮೊಸ್ ತಿನ್ನುವ ಅತಿಯಾದ ಆಸೆಯಿಂದಾಗಿ 7ನೇ ತರಗತಿಯ ಬಾಲಕನೊಬ್ಬ ತನ್ನ ಮನೆಯಲ್ಲಿದ್ದ ಸುಮಾರು 85 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಬೀದಿಬದಿಯ ವ್ಯಾಪಾರಿಗಳಿಗೆ ನೀಡಿದ ಆಘಾತಕಾರಿ ಪ್ರಕರಣವಿದು.
ಹೌದು.. ಆಶ್ಚರ್ಯವಾದರೂ ಇದು ಸತ್ಯ. ವಾರಣಾಸಿಯ ದೇವಾಲಯವೊಂದರಲ್ಲಿ ಅರ್ಚಕರಾಗಿರುವ ವಿಮಲೇಶ್ ಮಿಶ್ರಾ ಅವರ ಮಗನಿಗೆ ಮೊಮೊ ಎಂದರೆ ಪಂಚಪ್ರಾಣ. ಬಾಲಕನ ಈ ಚಪಲವನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯ ಮೊಮೊ ಅಂಗಡಿಯ ಮೂವರು ಮಾಲೀಕರು ಆತನಿಗೆ ಬಲೆ ಬೀಸಿದ್ದರು. “ಮನೆಯಿಂದ ಚಿನ್ನಾಭರಣ ತಂದುಕೊಟ್ಟರೆ ನಿನಗೆ ಬೇಕಾದಷ್ಟು ಮೊಮೊಗಳನ್ನು ಉಚಿತವಾಗಿ ನೀಡುತ್ತೇವೆ” ಎಂದು ಆತನಿಗೆ ಆಸೆ ತೋರಿಸಿದ್ದರು. ಈ ಆಮಿಷಕ್ಕೆ ಬಲಿಯಾದ ಅಮಾಯಕ ಬಾಲಕ, ಮನೆಯವರಿಗೆ ತಿಳಿಯದಂತೆ ಹಂತ ಹಂತವಾಗಿ ಮನೆಯಲ್ಲಿದ್ದ ಬೆಲೆಬಾಳುವ ಆಭರಣಗಳನ್ನು ತಂದು ವ್ಯಾಪಾರಿಗಳ ಕೈಗಿಟ್ಟಿದ್ದಾನೆ.
ಕಪಾಟು ತೆರೆದಾಗ ಕಾದಿತ್ತು ಆಘಾತ
ಈ ಘಟನೆಯು ಬೆಳಕಿಗೆ ಬಂದಿದ್ದು ವಿಮಲೇಶ್ ಅವರ ಸಹೋದರಿ ಮನೆಗೆ ಭೇಟಿ ನೀಡಿದಾಗ. ಸಹೋದರಿಯು ತನ್ನ ಆಭರಣಗಳನ್ನು ಕೇಳಿದಾಗ ಮಿಶ್ರಾ ಕುಟುಂಬದವರು ಕಪಾಟು ತೆರೆದು ನೋಡಿದ್ದಾರೆ. ಅಲ್ಲಿ ಸಂಗ್ರಹಿಸಿಟ್ಟಿದ್ದ ಎಲ್ಲಾ ಒಡವೆಗಳು ಮಾಯವಾಗಿರುವುದನ್ನು ಕಂಡು ಅವರು ಹೌಹಾರಿದ್ದಾರೆ. ಎಲ್ಲ ಕಡೆ ಹುಡುಕಾಡಿ ಕೊನೆಗೆ ಬಾಲಕನನ್ನು ತೀವ್ರವಾಗಿ ವಿಚಾರಿಸಿದಾಗ, ತಾನು ಮೊಮೊ ತಿನ್ನುವ ಸಲುವಾಗಿ ಅಂಗಡಿಯವರಿಗೆ ಒಡವೆಗಳನ್ನು ನೀಡಿರುವ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ.
ಪೊಲೀಸರಿಗೆ ಪೋಷಕರ ದೂರು
ತಮ್ಮ ಜೀವಮಾನದ ಉಳಿತಾಯವೆಲ್ಲಾ ಮೊಮೊ ವ್ಯಾಪಾರಿಗಳ ಪಾಲಾಗಿರುವುದನ್ನು ತಿಳಿದ ವಿಮಲೇಶ್ ಮಿಶ್ರಾ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಳುವಾದ ಆಭರಣಗಳ ಒಟ್ಟು ಮೌಲ್ಯ ಸುಮಾರು 85 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ. ದೂರಿನ ಅನ್ವಯ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮೊಮೊ ತಿನ್ನುವ ಚಿಕ್ಕ ಆಸೆಯೊಂದು ಇಡೀ ಕುಟುಂಬವನ್ನು ಬೀದಿಗೆ ತಂದ ಈ ಘಟನೆ ಈಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಮಾರುತಿ ಸುಜುಕಿ ‘ಇ-ವಿಟಾರಾ’ ಬೆಲೆ ಶೀಘ್ರದಲ್ಲೇ ಪ್ರಕಟ | ಎಲೆಕ್ಟ್ರಿಕ್ SUV ಮಾರುಕಟ್ಟೆಯಲ್ಲಿ ಹೊಸ ಸಂಚಲನ?


















