ಜೈಪುರ : ವಿಶ್ವದ ಅತ್ಯಂತ ಪ್ರತಿಷ್ಠಿತ ಸಾಹಿತ್ಯೋತ್ಸವಗಳಲ್ಲಿ ಒಂದಾದ ಜೈಪುರ್ ಲಿಟರೇಚಪರ್ ಫೆಸ್ಟಿವಲ್‌ನ 19ನೇ ಆವೃತ್ತಿಯು 2026ರ ಜನವರಿ 15 ರಿಂದ 19ರವರೆಗೆ ರಾಜಸ್ಥಾನದ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೀರ್‌ನಲ್ಲಿ ನಡೆಯಲಿದೆ. ವಿಶೇಷವೆಂದರೆ ಈ ಬಾರಿ ಈ ಸಾಹಿತ್ಯೋತ್ಸವದಲ್ಲಿ ಬುಕರ್ ಪ್ರಶಸ್ತಿ ವಿಜೇತ ಕನ್ನಡದ ಕಥೆಗಾರ್ತಿ ಬಾನು ಮುಷ್ತಾಕ್ ಭಾಗವಹಿಸಲಿದ್ದಾರೆ.
ವಿಶ್ವದ ಅತ್ಯಂತ ಜನಮೆಚ್ಚುಗೆಯ ಈ ಸಾಹಿತ್ಯೋತ್ಸವದ 19ನೇ ಆವೃತ್ತಿಯಲ್ಲಿ ಭಾಗವಹಿಸಲಿರುವ ಸಾಹಿತಿ, ಚಿಂತಕರ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಅನಾಮಿಕ, ಆನಂದ್ ನೀಲಕಂಠನ್, ಅನುರಾಧ ರಾಯ್, ಭಾವನಾ ಸೋಮಯ್ಯ, ಎಡ್ವರ್ಡ್ ಲೂಸ್, ಎಲಿಯನರ್ ಬ್ಯಾರಕ್ಲಾಫ್, ಗೋಪಾಲಕೃಷ್ಣ ಗಾಂಧಿ, ಹಾಲೀ ರೂಬನ್‌ಹೋಲ್ಡ್, ಹರ್ಲೀನ್ ಸಿಂಗ್ ಸಂಧು, ಹೆಲೆನ್ ಮೋಲ್ಸ್ ವರ್ಥ್, ಜಾನ್ ಲೀ ಆಂಡರ್ಸನ್, ಜಂಗ್ ಚಾಂಗ್, ಕೆ. ಆರ್. ಮೀರಾ, ಕೇಟ್ ಮಾಸ್, ಕಿಮ್ ಘಟಾಸ್, ಮನು ಜೋಸೆಫ್, ಓಲ್ಗಾ ಟೊಕಾರ್ಜುಕ್, ಟಿಮೊಥಿ ಬರ್ನರ್ಸ್-ಲೀ, ರಶ್ಮಿ ನರ್ಜರಿ, ರುಚಿರ್ ಜೋಶಿ, ಸಲ್ಮಾ, ಶೋಭಾ ಡೇ, ಸ್ಟೀಫನ್ ಫ್ರೈ ಮತ್ತು ವಿಶ್ವನಾಥನ್ ಆನಂದ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಈ ಬಾರಿ 350ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದು, ಆರು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಕಾದಂಬರಿ, ಕವಿತೆ, ಇತಿಹಾಸ, ಕಲೆ, ವಿಜ್ಞಾನ, ಗಣಿತ, ವೈದ್ಯಕೀಯ, ಮಾನಸಿಕ ಆರೋಗ್ಯ, ಹವಾಮಾನ ಬದಲಾವಣೆ, ಉದ್ಯಮ, ಜಿಯೋ ಪಾಲಿಟಿಕ್ಸ್ ಮತ್ತು ಸಂಘರ್ಷ, ಲಿಂಗ ವೈವಿಧ್ಯತೆ, ಅನುವಾದ, ಸಿನಿಮಾ ಹೀಗೆ ಸಾಕಷ್ಟು ವಿಷಯಗಳ ಕುರಿತು ಸಂವಾದ ನಡೆಯಲಿದೆ.
ಈ ಕುರಿತು ಮಾತನಾಡಿರುವ ಲೇಖಕಿ ಮತ್ತು ಜೈಪುರ್ ಲಿಟ್ ಫೆಸ್ಟ್‌ನ ಸಹ-ನಿರ್ದೇಶಕಿ ನಮಿತಾ ಗೋಖಲೆ ಅವರು, “ಭಾರತೀಯ ಭಾಷೆಗಳು ಮತ್ತು ಸಾಹಿತ್ಯ ವೈವಿಧ್ಯತೆಯ ಮೇಲೆ ವಿಶೇಷ ಗಮನವನ್ನು ಹರಿಸಿ ನಾವು ಗೋಷ್ಠಿಗಳನ್ನು ರೂಪಿಸಿದ್ದೇವೆ. ಬದಲಾಗುತ್ತಿರುವ ಜಗತ್ತನ್ನು ಗಮನಿಸುತ್ತಾ, ಜಗತ್ತು ಮತ್ತು ಸಾಹಿತ್ಯ ಸ್ವರೂಪಗಳಲ್ಲಿ ಆಗುತ್ತಿರುವ ಬದಲಾವಣೆಯ ವಿಚಾರಗಳನ್ನು ತರುವ ಪ್ರಯತ್ನ ಮಾಡಿದ್ದೇವೆ” ಎಂದು ಹೇಳಿದರು.
ಇತಿಹಾಸಕಾರ, ಲೇಖಕ ಮತ್ತು ಜೈಪುರ ಸಾಹಿತ್ಯೋತ್ಸವದ ಸಹ-ನಿರ್ದೇಶಕ ವಿಲಿಯಂ ಡಾಲ್‌ರಿಂಪಲ್ ಅವರು, “ಜೈಪುರ ಸಾಹಿತ್ಯ ಉತ್ಸವವು ಅಕ್ಷರ ಮತ್ತು ಮೌಖಿಕ ಪರಂಪರೆಯ ಸಂಭ್ರಮಾಚರಣೆಯಾಗಿದ್ದು, ಕಥೆಗಳ ಶಕ್ತಿಯನ್ನು ಸಾರುತ್ತದೆ ಮತ್ತು ಸಾಹಿತ್ಯವು ಸ್ಫೂರ್ತಿ ಹಾಗೂ ಸಂಪರ್ಕ ಒದಗಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದರು.
ಟೀಮ್‌ವರ್ಕ್ ಆರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜೋಯ್ ಕೆ. ರಾಯ್ ಅವರು, “ಜೈಪುರ ಸಾಹಿತ್ಯ ಉತ್ಸವವು ಸಂಸ್ಕೃತಿ, ಸೃಜನಶೀಲತೆ ಮತ್ತು ಸಹಯೋಗವನ್ನು ಸಂಭ್ರಮಿಸುವ ಜಾಗತಿಕ ಮಟ್ಟದ ಸಾಹಿತ್ಯೋತ್ಸವವಾಗಿದೆ. ಇದು ಕೇವಲ ಉತ್ಸವ ಮಾತ್ರವಲ್ಲ, ಇದು ಸಮಾಜಗಳನ್ನು ಪರಸ್ಪರ ಸಂಪರ್ಕಿಸುವ ಮತ್ತು ಸಹಾನುಭೂತಿ ಹಾಗೂ ತಿಳುವಳಿಕೆಯನ್ನು ಉದ್ದೀಪಿಸುವ ಸಾಂಸ್ಕೃತಿಕ ಚಳವಳಿ” ಎಂದರು.
ಮೂಲ ಕಾರ್ಯಕ್ರಮದ ಜೊತೆಗೆ 13ನೇ ಆವೃತ್ತಿಯ ಜೈಪುರ್ ಬುಕ್ ಮಾರ್ಕ್ (ಜೆಬಿಎಂ) ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ. ಇದು ಪ್ರಕಾಶಕರು, ಲಿಟರರಿ ಏಜೆಂಟ್‌ಗಳು, ಅನುವಾದಕರು ಮತ್ತು ಲೇಖಕರಿಗೆ ಪ್ರಮುಖ ಬಿ2ಬಿ ವೇದಿಕೆಯಾಗಿದೆ. ಈ ಉತ್ಸವದಲ್ಲಿ ಅಮೆರ್ ಕೋಟೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಜೈಪುರ್ ಮ್ಯೂಸಿಕ್ ಸ್ಟೇಜ್ ನಲ್ಲಿ ಭಾರತೀಯ ಮತ್ತು ಅಂತರಾಷ್ಟ್ರೀಯ ಸಂಗೀತಗಾರರು ಸಂಗೀತ ಪ್ರದರ್ಶನಗಳನ್ನು ನೀಡಲಿದ್ದಾರೆ.



















