ವಿಶ್ವಸಂಸ್ಥೆ: “ಮೊದಲು ನಿಮ್ಮ ದೇಶದ ಜನರ ಮೇಲೆಯೇ ಬಾಂಬ್ ಹಾಕುವುದು ನಿಲ್ಲಿಸಿ”. ಹೀಗೆಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ವಾಗ್ದಾಳಿ ನಡೆಸಿದೆ. ಈ ಮೂಲಕ ಇತ್ತೀಚೆಗೆ ತನ್ನದೇ ನಾಗರಿಕರನ್ನು ವೈಮಾನಿಕ ದಾಳಿ ನಡೆಸಿ ಹತ್ಯೆಗೈದ ಪಾಕಿಸ್ತಾನದ ಬಗ್ಗೆ ಭಾರತ ವ್ಯಂಗ್ಯವಾಡಿದೆ. ಭಾರತದ ವಿರುದ್ಧ ಆಧಾರರಹಿತ ಮತ್ತು ಪ್ರಚೋದನಕಾರಿ ಆರೋಪಗಳನ್ನು ಮಾಡಲು ಪಾಕಿಸ್ತಾನವು ಅಂತರರಾಷ್ಟ್ರೀಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಭಾರತ ಆರೋಪಿಸಿದೆ.
ಮಾನವ ಹಕ್ಕುಗಳ ಮಂಡಳಿಯ 60ನೇ ಅಧಿವೇಶನದಲ್ಲಿ ಮಾತನಾಡಿದ ಜಿನೀವಾದಲ್ಲಿರುವ ಭಾರತದ ಖಾಯಂ ಮಿಷನ್‌ನ ಕೌನ್ಸಿಲರ್ ಕ್ಷಿತಿಜ್ ತ್ಯಾಗಿ, “ನಮ್ಮ ಭೂಪ್ರದೇಶದ ಮೇಲೆ ಕಣ್ಣಿಡುವ ಬದಲು, ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಭೂಪ್ರದೇಶವನ್ನು ಮೊದಲು ತೆರವುಗೊಳಿಸಲಿ. ಜೀವಾಧಾರಕ ವ್ಯವಸ್ಥೆಯ ಮೇಲೆ ನಿಂತಿರುವ ತನ್ನ ಆರ್ಥಿಕತೆಯನ್ನು ರಕ್ಷಿಸಿಕೊಳ್ಳುವುದು, ಸೇನಾ ಪ್ರಾಬಲ್ಯದಿಂದ ಹತ್ತಿಕ್ಕಲ್ಪಟ್ಟಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವುದು ಮತ್ತು ಕಿರುಕುಳದಿಂದ ಕಳಂಕಿತವಾಗಿರುವ ತನ್ನ ಮಾನವ ಹಕ್ಕುಗಳ ದಾಖಲೆಯನ್ನು ಸುಧಾರಿಸಿಕೊಳ್ಳುವುದರತ್ತ ಗಮನಹರಿಸಲಿ. ಭಯೋತ್ಪಾದನೆಯನ್ನು ರಫ್ತು ಮಾಡುವುದು, ವಿಶ್ವಸಂಸ್ಥೆ ನಿಷೇಧಿಸಿದ ಭಯೋತ್ಪಾದಕರಿಗೆ ಆಶ್ರಯ ನೀಡುವುದು ಮತ್ತು ಸ್ವಂತ ಜನರ ಮೇಲೆ ಬಾಂಬ್ ಹಾಕುವುದರಲ್ಲಿ ಪಾಕಿಸ್ತಾನ ಬ್ಯುಸಿಯಾಗಿದ್ದು, ಅದರಿಂದ ಸಮಯ ಸಿಕ್ಕರೆ ಅವರು ಈ ಕೆಲಸ ಮಾಡಬಹುದು” ಎಂದು ತೀಕ್ಷ್ಣವಾಗಿ ನುಡಿದರು.
ಪಾಕಿಸ್ತಾನದ ವಾಯುಪಡೆಯು ತನ್ನದೇ ದೇಶದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತಿರಾಹ್ ಕಣಿವೆಯ ಮಾತೇ ದಾರಾ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಭಾರತ ಈ ವಾಗ್ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ನಾಗರಿಕರು ಮೃತಪಟ್ಟಿದ್ದರು. ಜನರು ನಿದ್ರಿಸುತ್ತಿದ್ದಾಗ ತಡರಾತ್ರಿ 2 ಗಂಟೆ ಸುಮಾರಿಗೆ ಪಾಕಿಸ್ತಾನಿ ವಾಯುಪಡೆಯು ಚೀನಾ ನಿರ್ಮಿತ ಜೆ-17 ಯುದ್ಧ ವಿಮಾನಗಳನ್ನು ಬಳಸಿ, ಚೀನಾದ ಎಲ್ಎಸ್-6 ಲೇಸರ್-ಗೈಡೆಡ್ ಬಾಂಬ್‌ಗಳನ್ನು ಗ್ರಾಮದ ಮೇಲೆ ಹಾಕಿತ್ತು.
ಈ ಘಟನೆಯು ಸ್ಥಳೀಯ ಸಮುದಾಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳಿಂದಾಗಿ ಜನರು ಈಗಾಗಲೇ ಆತಂಕದಲ್ಲಿದ್ದಾರೆ. ಕಳೆದ ವಾರವಷ್ಟೇ, ಪ್ರಾಂತ್ಯದ ಸ್ವಾತ್ ಕಣಿವೆಯ ಮಿಂಗೋರಾ ನಗರದಲ್ಲಿ ಸಾವಿರಾರು ಜನರು ಬೀದಿಗಿಳಿದು, ಶಾಂತಿ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಖೈಬರ್ ಪಖ್ತುಂಖ್ವಾ ಪಾಕಿಸ್ತಾನದ ಒಂದು ದುರ್ಗಮ ಮತ್ತು ಪರ್ವತಮಯ ಪ್ರದೇಶವಾಗಿದ್ದು, ಭಯೋತ್ಪಾದಕರ ಅಡಗುತಾಣಗಳಿಂದ ತುಂಬಿದೆ ಮತ್ತು ಇಲ್ಲಿ ನಿಯಂತ್ರಣ ಸ್ಥಾಪಿಸಲು ಪಾಕಿಸ್ತಾನ ಸರ್ಕಾರವು ಹೆಣಗಾಡುತ್ತಿದೆ.



















