ಬೆಂಗಳೂರು: ಕೊಡಗು, ಧಾರವಾಡ, ದಾವಣಗೆರೆ, ಹಾಸನ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಏಕಕಾಲಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇದರಿಂದ ಸಾರ್ವಜನಿಕರು, ವಕೀಲರು ಹಾಗೂ ಕೋರ್ಟ್ ಸಿಬ್ಬಂದಿ ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ದೌಡಾಯಿಸಿದ್ದು, ತಪಾಸಣೆ ಕೈಗೊಂಡಿದ್ದಾರೆ.
ಹಾವೇರಿ ಜಿಲ್ಲಾ ನ್ಯಾಯಲಕ್ಕೆ ಬಾಂಬ್ ಬೆದರಿಕೆ

ಹಾವೇರಿ ಜಿಲ್ಲಾ ನ್ಯಾಯಾಲಕ್ಕೂ ಫ್ಯಾಕ್ಸ್ ಮೂಲಕವಾಗಿ ಬಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ನೇರವಾಗಿ ನ್ಯಾಯಾಲಯಕ್ಕೆ ಪ್ಯಾಕ್ಸ್ ಮೂಲಕ ಬೆದರಿಕೆ ಕರೆ ಬಂದಿದ್ದು, ಬಳಿಕ ನ್ಯಾಯಾಧೀಶರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸಿಬ್ಬಂದಿಗಳನ್ನ ಹೊರ ಕಳುಹಿಸಿದ್ದಾರೆ. ಇಂದಿನ ನ್ಯಾಯಾಲಯದ ಎಲ್ಲಾ ಕಲಾಪಗಳು ಮೊಟಕುಗೊಳಿಸಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳು, ಬಾಂಬ್ ನಿಷ್ಕ್ರಿಯ ದಳದ ತಂಡ ದೌಡಾಯಿಸಿ, ಕಾರು ಪಾರ್ಕಿಂಗ್ ಸೇರಿದಂತೆ ನ್ಯಾಯಾಲಯದ ಆವರಣದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ ನ್ಯಾಯಾಲಯ ಸಂಕೀರ್ಣಕ್ಕೆ ಬೆದರಿಕೆ

ಮಡಿಕೇರಿಯಲ್ಲಿ ಇರುವ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸ್ ಇಲಾಖೆ ಭದ್ರತಾ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆಯಾಗಿ ನ್ಯಾಯಾಲಯ ಸಂಕೀರ್ಣಕ್ಕೆ ಪೊಲೀಸ್ ವಿಶೇಷ ಭದ್ರತಾ ಪಡೆ, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರೀಯ ದಳಗಳು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆ ವೇಳೆ ನ್ಯಾಯಾಲಯದ ಒಳಗಿದ್ದ ಸಿಬ್ಬಂದಿ, ವಕೀಲರು ಹಾಗೂ ಇತರೆ ಸಿಬ್ಬಂದಿಯನ್ನ ಹೊರಗೆ ಕಳುಹಿಸಲಾಗಿದೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಲಯ ಸಂಕೀರ್ಣದ ಪ್ರತಿಯೊಂದು ಭಾಗವನ್ನೂ ಸೂಕ್ಷ್ಮವಾಗಿ ತಪಾಸಣೆ ನಡೆಸುತ್ತಿರುವ ಪೊಲೀಸರು ಅನುಮಾನಾಸ್ಪದ ವಸ್ತುಗಳ ಶೋಧ ನಡೆಸುತ್ತಿದ್ದಾರೆ. ಅಲ್ಲದೇ ಬೆದರಿಕೆ ಬಂದ ಇ-ಮೇಲ್ ಮೂಲ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.
ಧಾರವಾಡ ಹೈಕೋರ್ಟ್‌ಗೆ ಬೆದರಿಕೆ

ಇದೇ ವೇಳೆ ಧಾರವಾಡ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಕೋರ್ಟ್ ಸಿಬ್ಬಂದಿ ಹಾಗೂ ವಕೀಲಯರನ್ನ ಹೊರಗೆ ಕಳುಹಿಸಿದ್ದು, ಬಳಿಕ ಧಾರವಾಡ ಗರಗ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೋರ್ಟ್ ಆವರಣಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಎಸ್ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಶೋಧ ನಡೆಸಿದ್ದಾರೆ. ಇದರೊಂದಿಗೆ ಡಿಜಿಟಲ್ ತಪಾಸಣೆ ಮಾಡುವಂತೆ ಧಾರವಾಡ ಹೈಕೋರ್ಟ್ ವಕೀಲರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕೋರ್ಟ್‌ಗೆ ಬಾಂಬ್ ಬೆದರಿಕೆ

ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೂ ಅಪರಿಚಿತ ಇ-ಮೇಲ್ ವಿಳಾಸದಿಂದ ಬಾಂಬ್ ಬೆದರಿಕೆ ಬಂದಿದೆ. ʻಇಂದು ಮಧ್ಯಾಹ್ನ 12:30ರ ಹೊತ್ತಿಗೆ ಆರ್‌ಡಿಎಕ್ಸ್ ಸ್ಫೋಟವಾಗಲಿದೆʼ ಎಂಬ ಸಂದೇಶ ಬಂದಿದೆ. ಈ ಹಿನ್ನೆಲೆ ಕೂಡಲೇ ಕಲಾಪಗಳನ್ನ ಸ್ಥಗಿತಗೊಳಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇ-ಮೇಲ್ ವಿಳಾಸ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಸದ್ಯ ಕೋರ್ಟ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ಬೆದರಿಕೆ ಸಂದೇಶ

ಇಲ್ಲಿನ ಜಿಜಿಲ್ಲಾ ನಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಹಾಸನ ನಗರ ಠಾಣೆ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. ಕೋರ್ಟ್ ಸಿಬ್ಬಂದಿ, ವಕೀಲರನ್ನ ಆವರಣದಿಂದ ಹೊರಗೆ ಕಳಿಸಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪಾರ್ಕಿಂಗ್, ಕೋರ್ಟ್ ಆವರಣ, ಒಳಾಂಗಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಪಾಸಣೆ ನಡೆಸುತ್ತಿವೆ.
ರಾಮನಗರ ಜಿಲ್ಲಾ ಕೋರ್ಟ್‌ಗೂ ಬಾಂಬ್ ಬೆದರಿಕೆ

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಜಿಲ್ಲಾ ಕೋರ್ಟ್‌ಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಮೂಲಕ ಸಂದೇಶ ಬಂದ ಹಿನ್ನೆಲೆ ಕೋರ್ಟ್ ಕಲಾಪ ಬಹಿಷ್ಕರಿಸಿ ನ್ಯಾಯಾಧೀಶರು, ವಕೀಲರು ಹೊರಬಂದಿದ್ದಾರೆ.
ಮಂಡ್ಯ ನಗರದ ಕೋರ್ಟ್‌ಗೆ ಬಾಂಬ್ ಬೆದರಿಕೆ

ಮಂಡ್ಯ ನಗರದ ಕೋರ್ಟ್ ಗೆ ಬಾಂಬ್ ಬೆದರಿಕೆ ಬಂದ ಹಿನ್ನಲೆ. ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ಬೆದರಿಕೆಯ ವಿಷಯ ತಿಳಿದು ಕೋರ್ಟ್ ಕಲಾಪ ಸ್ಥಗಿತಗೊಳಿಸಿ ಕೋರ್ಟ್ ನಿಂದ ಜಡ್ಜ್ ಗಳು, ವಕೀಲರು ಹಾಗು ಕಕ್ಷಿದಾರರು ಹೊರಗೆ ಬಂದಿದ್ದಾರೆ. ಬಳಿಕ ಸ್ಥಳಕ್ಕೆ ಬಾಂಬ್ ಸ್ಕ್ಯಾಡ್ ಆಗಮಿಸಿ ನ್ಯಾಯಾಲಯದ ಕಟ್ಟಡ ಸೇರಿ ಆವರಣದಲ್ಲಿ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ : ರಾಯಚೂರಲ್ಲಿ ಅಕ್ರಮವಾಗಿ ರಸಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿ ವಶ



















