ಇಡುಕ್ಕಿ : ಸುಮಾರು ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ಕೇರಳದ ಇಡುಕ್ಕಿಯ ಮುಲ್ಲಪೆರಿಯಾರ್ ಡ್ಯಾಂಗೆ ಇಂದು ಬಾಂಬ್ ಬೆದರಿಕೆ ಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ.
ಜಲಾಶಯವನ್ನು ಸ್ಫೋಟಿಸುವುದಾಗಿ ನೆರೆಯ ತ್ರಿಶೂರ್‌ನಲ್ಲಿರುವ ಜಿಲ್ಲಾ ಕಲೆಕ್ಟರ್ ಕಚೇರಿಗೆ ಕಿಡಿಗೇಡಿಗಳು ಇಮೇಲ್ ಕಳುಹಿಸಿದ್ದಾರೆ. ಈ ಕುರಿತು ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಅಣೆಕಟ್ಟು ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದ್ದು, ಈಯವರೆಗೆ ಅನುಮಾನಾಸ್ಪದ ರೀತಿಯ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹಾಗಿದ್ದರೂ ಪರಿಶೀಲನೆ ಮುಂದುವರೆಸಲಾಗಿದೆ.
ಮುಲ್ಲಪೆರಿಯಾರ್ ಅಣೆಕಟ್ಟನ್ನು 1895ರಲ್ಲಿ ಕಟ್ಟಲಾಗಿದ್ದು, ಈ ಅಣೆಕಟ್ಟಿನ ವಿಚಾರವಾಗಿ ತಮಿಳುನಾಡು ಮತ್ತು ಕೇರಳದ ನಡುವೆ ವಿವಾದವಿದೆ. 130 ವರ್ಷಗಳಷ್ಟು ಹಳೆಯ ಅಣೆಕಟ್ಟಿನ ಸುರಕ್ಷತೆ ಮತ್ತು ರಚನಾತ್ಮಕ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತವಾದ ನಂತರ, ಹಳೆಯ ಅಣೆಕಟ್ಟಿನ ಬದಲು ಹೊಸ ಅಣೆಕಟ್ಟು ನಿರ್ಮಿಸುವಂತೆ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ತಮಿಳುನಾಡು, ಕೇರಳ ಸರ್ಕಾರಗಳು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (NDMA) ನೋಟಿಸ್ ಜಾರಿ ಮಾಡಿದೆ. ಇದೇ ದಿನ ಅಣೆಕಟ್ಟೆಗೆ ಬಾಂಬ್ ಬೆದರಿಕೆ ಕೂಡ ಬಂದಿದೆ.