ಕುಂದಾಪುರ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೆಡ್ ಸ್ಕೀ ಬೋಟ್ ಮುಗುಚಿ ಬಿದ್ದ ಪರಿಣಾಮ ಸಮುದ್ರದ ಪಾಲಾಗಿದ್ದ ರೈಡರ್ ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.
ಸಾವನ್ನಪ್ಪಿರುವ ವ್ಯಕ್ತಿಯನ್ನು ರೋಹಿದಾಸ್(41) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಉಡುಪಿ ಕಡಲ ಕಿನಾರೆಯಲ್ಲಿ ರೋಹಿದಾಸ್ ಸಮುದ್ರದ ಪಾಲಾಗಿದ್ದರು. ಈ ಸಂದರ್ಭದಲ್ಲಿ ಎಷ್ಟು ಹುಡುಕಾಡಿದರೂ ರೋಹಿದಾಸ್ ದೇಹ ಪತ್ತೆಯಾಗಿರಲಿಲ್ಲ. ಘಟನೆ ನಡೆದು 36 ಗಂಟೆಗಳ ನಂತರ ಹೊಸಪೇಟೆ ರುದ್ರಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ದೇಹ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿಗೆ ಮಾಹಿತಿ ನೀಡಿದ್ದಾರೆ. ನಂತರ ಶವವನ್ನು ಮೇಲಕ್ಕೆ ತರಲಾಗಿದೆ. ಆನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.