ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅತ್ಯಂತ ಆಘಾತಕಾರಿ ಸೈಬರ್ ವಂಚನೆ ಪ್ರಕರಣವೊಂದರಲ್ಲಿ, 57 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಬರೋಬ್ಬರಿ 31.83 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಸಿಬಿಐ ಅಧಿಕಾರಿಗಳೆಂದು ನಂಬಿಸಿ, ವಂಚಕರು ಆಕೆಯನ್ನು ಆರು ತಿಂಗಳ ಕಾಲ ‘ಡಿಜಿಟಲ್ ಅರೆಸ್ಟ್’ನಲ್ಲಿ ಇರಿಸಿ, ನಿರಂತರ ವಿಡಿಯೋ ಕಣ್ಗಾವಲಿನಲ್ಲಿಟ್ಟು ಈ ಬೃಹತ್ ಮೊತ್ತವನ್ನು ದೋಚಿದ್ದಾರೆ. ಇಂದಿರಾನಗರ ನಿವಾಸಿ ಉಮಾರಾಣಿ ವಂಚನೆಗೆ ಒಳಗಾದ ಮಹಿಳೆ.
ಸೈಬರ್ ವಂಚಕರು ಮಹಿಳೆಯನ್ನು ವಂಚನೆಯ ಖೆಡ್ಡಾಗೆ ಕೆಡವಿದ್ಹೇಗೆ?
2024ರ ಸೆಪ್ಟೆಂಬರ್‌ನಲ್ಲಿ ಈ ವಂಚನೆಯ ಪರ್ವ ಆರಂಭವಾಯಿತು. ಮಹಿಳೆಗೆ ಡಿಎಚ್‌ಎಲ್ ಕೊರಿಯರ್ ಕಂಪನಿಯಿಂದ ಕರೆ ಮಾಡುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬ, “ನಿಮ್ಮ ಹೆಸರಿನಲ್ಲಿ ಮುಂಬೈನ ಅಂಧೇರಿ ಕೇಂದ್ರಕ್ಕೆ ಪಾರ್ಸೆಲ್ ಬಂದಿದೆ. ಅದರಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಹಾಗೂ ನಿಷೇಧಿತ ಎಂಡಿಎಂಎ ಡ್ರಗ್ಸ್ ಇದೆ,” ಎಂದು ತಿಳಿಸಿದ್ದಾನೆ.
ತಾನು ಬೆಂಗಳೂರಿನಲ್ಲಿದ್ದು, ಆ ಪಾರ್ಸೆಲ್‌ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮಹಿಳೆ ಹೇಳಿದಾಗ, “ನಿಮ್ಮ ಫೋನ್ ನಂಬರ್ ಪಾರ್ಸೆಲ್‌ಗೆ ಲಿಂಕ್ ಆಗಿದೆ, ಇದು ಗಂಭೀರ ಸೈಬರ್ ಕ್ರೈಂ ಆಗಿರಬಹುದು” ಎಂದು ಹೆದರಿಸಿದ್ದಾನೆ. ನಂತರ ಕರೆಯನ್ನು ಸಿಬಿಐ ಅಧಿಕಾರಿಯೆಂದು ಹೇಳಿಕೊಂಡ ಮತ್ತೊಬ್ಬನಿಗೆ ವರ್ಗಾಯಿಸಿದ್ದಾನೆ. ಆತ, “ಎಲ್ಲಾ ಸಾಕ್ಷ್ಯಗಳು ನಿಮ್ಮ ವಿರುದ್ಧವೇ ಇವೆ” ಎಂದು ಬೆದರಿಸಿದ್ದಾನೆ.
‘ಡಿಜಿಟಲ್ ಅರೆಸ್ಟ್’ ಎಂಬ ಸೆರೆಮನೆ
ವಂಚಕರು, “ಕ್ರಿಮಿನಲ್‌ಗಳು ನಿಮ್ಮ ಮನೆಯ ಮೇಲೆ ನಿಗಾ ಇಟ್ಟಿದ್ದಾರೆ, ಪೊಲೀಸರನ್ನು ಸಂಪರ್ಕಿಸಿದರೆ ಅಪಾಯ” ಎಂದು ಎಚ್ಚರಿಸಿ, ಕುಟುಂಬದವರಿಂದ ಈ ವಿಚಾರವನ್ನು ಮುಚ್ಚಿಡುವಂತೆ ಸೂಚಿಸಿದ್ದಾರೆ. ಮಗನ ಮದುವೆ ಸಮೀಪಿಸುತ್ತಿದ್ದರಿಂದ, ಕುಟುಂಬದ ಸುರಕ್ಷತೆಯ ಬಗ್ಗೆ ಭಯಗೊಂಡ ಮಹಿಳೆ ವಂಚಕರ ಎಲ್ಲಾ ಸೂಚನೆಗಳನ್ನು ಪಾಲಿಸಿದ್ದಾರೆ.
‘ಪ್ರದೀಪ್ ಸಿಂಗ್’, ‘ಮೋಹಿತ್ ಹಂಡಾ’ ಎಂದು ಪರಿಚಯಿಸಿಕೊಂಡ ವಂಚಕರು, ಆಕೆಯಿಂದ ಎರಡು ಸ್ಕೈಪ್ ಐಡಿಗಳನ್ನು ಇನ್‌ಸ್ಟಾಲ್ ಮಾಡಿಸಿ, ಆರು ತಿಂಗಳ ಕಾಲ ನಿರಂತರ ವಿಡಿಯೋ ಕರೆಯಲ್ಲೇ ಇರುವಂತೆ ಒತ್ತಾಯಿಸಿದ್ದಾರೆ. “ನೀವು ಈಗ ನಮ್ಮ ಹೌಸ್ ಅರೆಸ್ಟ್‌ನಲ್ಲಿದ್ದೀರಿ” ಎಂದು ನಂಬಿಸಿ, ಆಕೆಯ ಪ್ರತಿ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.
187 ವಹಿವಾಟುಗಳಲ್ಲಿ 32 ಕೋಟಿ ರೂ. ಲೂಟಿ
“ನಿಮ್ಮ ಸಾಚಾತನ ಸಾಬೀತುಪಡಿಸಲು ನಿಮ್ಮ ಆಸ್ತಿಗಳನ್ನು ಪರಿಶೀಲಿಸಬೇಕು” ಎಂದು ನಂಬಿಸಿದ ವಂಚಕರು, ಮಹಿಳೆಯಿಂದ ಸಂಪೂರ್ಣ ಆರ್ಥಿಕ ವಿವರಗಳನ್ನು ಪಡೆದುಕೊಂಡಿದ್ದಾರೆ. ನಂತರ, ‘ಭದ್ರತಾ ಮೊತ್ತ’ ಮತ್ತು ‘ತೆರಿಗೆ’ ಹೆಸರಿನಲ್ಲಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಈ ಒತ್ತಡಕ್ಕೆ ಮಣಿದ ಮಹಿಳೆ, ತನ್ನ ಸ್ಥಿರ ಠೇವಣಿಗಳನ್ನು (Fixed Deposits) ಮುರಿದು, ಉಳಿತಾಯದ ಹಣವನ್ನೆಲ್ಲಾ ಸೇರಿಸಿ, ಒಟ್ಟು 187 ವಹಿವಾಟುಗಳ ಮೂಲಕ 31.83 ಕೋಟಿ ರೂಪಾಯಿಗಳನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದಾರೆ.
“ಪರಿಶೀಲನೆ ನಂತರ ನಿಮ್ಮ ಹಣವನ್ನು 2025ರ ಫೆಬ್ರವರಿಯೊಳಗೆ ಹಿಂತಿರುಗಿಸಲಾಗುವುದು” ಎಂದು ವಂಚಕರು ಪದೇ ಪದೇ ಭರವಸೆ ನೀಡುತ್ತಿದ್ದರು. ಡಿಸೆಂಬರ್‌ನಲ್ಲಿ ಮಗನ ನಿಶ್ಚಿತಾರ್ಥದ ಮೊದಲು, ನಕಲಿ ಕ್ಲಿಯರೆನ್ಸ್ ಪತ್ರವನ್ನೂ ನೀಡಿ ನಂಬಿಸಿದ್ದರು.
ವಂಚನೆ ಬಯಲಿಗೆ ಬಂದಿದ್ದು ಹೇಗೆ?
ಫೆಬ್ರವರಿ ಕಳೆದರೂ ಹಣ ಹಿಂತಿರುಗದಿದ್ದಾಗ ಮತ್ತು ವಂಚಕರು ಸಂಪರ್ಕ ಕಡಿತಗೊಳಿಸಿದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ಈ ಆರು ತಿಂಗಳ ಮಾನಸಿಕ ಹಿಂಸೆಯಿಂದಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಗನ ಮದುವೆ ಮುಗಿಯುವವರೆಗೆ ಕಾದ ಅವರು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಅತ್ಯಾಧುನಿಕ ವಂಚನಾ ಜಾಲದ ಬೆನ್ನುಬಿದ್ದಿದ್ದಾರೆ.
ಇದನ್ನೂ ಓದಿ : ಸೌದಿಯಲ್ಲಿ ಬಸ್-ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ | 42 ಭಾರತೀಯ ಹಜ್ ಯಾತ್ರಿಕರು ಸಜೀವ ದಹನ



















