ಪುಣೆ: ಭಾರತೀಯ ಸ್ಟೇಟ್ ಬ್ಯಾಂಕ್‌ಗೆ (SBI) ನಕಲಿ ದಾಖಲೆ ನೀಡಿ ಕೋಟ್ಯಂತರ ರೂ. ಸಾಲ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಪುಣೆಯಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದೆ. ಪುಣೆಯ ಹಲವು ಕಡೆ ನಡೆದ ದಾಳಿಯ ವೇಳೆ ವಂಚಕರಿಂದ ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್, ವೋಲ್ವೋ ಮತ್ತು ಲ್ಯಾಂಡ್ ರೋವರ್‌ಗಳನ್ನು ಜಪ್ತಿ ಮಾಡಲಾಗಿದೆ.
ಮುಂಬೈ ವಲಯದ ಇಡಿ ಅಧಿಕಾರಿಗಳು ನ.25 ಮತ್ತು 26 ರಂದು ಪುಣೆಯ 12 ಕಡೆಗಳಲ್ಲಿ ಶೋಧ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002ರ ಅಡಿಯಲ್ಲಿ ಈ ದಾಳಿ ನಡೆದಿದ್ದು, ಸಾಲ ಪಡೆದವರು ಮತ್ತು ಕಾರು ಡೀಲರ್‌ಗಳ ಮನೆ ಹಾಗೂ ಕಚೇರಿಗಳನ್ನು ಜಾಲಾಡಲಾಗಿದೆ.
ಅಧಿಕಾರಿ ಶಾಮೀಲು, ಬ್ಯಾಂಕ್‌ಗೆ ಟೋಪಿ
ಈ ವಂಚನೆ ಪ್ರಕರಣದಲ್ಲಿ ಎಸ್‌ಬಿಐ ಬ್ಯಾಂಕ್‌ನ ಆಗಿನ ಶಾಖಾ ವ್ಯವಸ್ಥಾಪಕರಾಗಿದ್ದ ಅಮರ್ ಕುಲಕರ್ಣಿ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. 2017ರಿಂದ 2019ರ ಅವಧಿಯಲ್ಲಿ ಪುಣೆಯ ಯೂನಿವರ್ಸಿಟಿ ರಸ್ತೆ ಶಾಖೆಯಲ್ಲಿ ವ್ಯವಸ್ಥಾಪಕರಾಗಿದ್ದ ಕುಲಕರ್ಣಿ, ಆಟೋ ಲೋನ್ ಸಲಹೆಗಾರ ಆದಿತ್ಯ ಸೇಠಿಯಾ ಜೊತೆಗೂಡಿ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಲ ಪಡೆಯಲು ಅರ್ಹತೆಯಿಲ್ಲದವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಯಾವುದೇ ಪರಿಶೀಲನೆ ಇಲ್ಲದೆ ಸಾಲ ಮಂಜೂರು ಮಾಡಲಾಗಿದೆ. ಕಾರಿನ ನೈಜ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ನಕಲಿ ಕೊಟೇಶನ್ ನೀಡಿ, ಬ್ಯಾಂಕ್‌ನಿಂದ ಹೆಚ್ಚು ಹಣ ಸಾಲ ಪಡೆಯಲಾಗಿದೆ. ಕೆಲವು ಪ್ರಕರಣಗಳಲ್ಲಿ ಡೀಲರ್ ಇನ್‌ವಾಯ್ಸ್‌ಗಿಂತ 61 ಲಕ್ಷ ರೂ.ವರೆಗೆ ಹೆಚ್ಚು ಹಣ ತೋರಿಸಿ ಸಾಲ ಎತ್ತಲಾಗಿದೆ.
19.38 ಕೋಟಿ ರೂ. ವಂಚನೆ
ಒಟ್ಟು 19.38 ಕೋಟಿ ರೂ.ಗಳಷ್ಟು ಮೊತ್ತದ ಈ ಹಗರಣವನ್ನು ಸಿಬಿಐ (CBI) ಮತ್ತು ಪುಣೆ ಭ್ರಷ್ಟಾಚಾರ ನಿಗ್ರಹ ದಳ (ACB) ಮೊದಲು ದಾಖಲಿಸಿಕೊಂಡಿದ್ದವು. ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು. ಬ್ಯಾಂಕ್‌ನ ಆಂತರಿಕ ತನಿಖೆಯ ವೇಳೆ ಒಬ್ಬ ಸಾಲಗಾರನ ಖಾತೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಹೆಚ್ಚಿನ ಪರಿಶೀಲನೆ ನಡೆಸಿದಾಗ ಪ್ಯಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳು ನಕಲಿ ಎಂಬುದು ಬಯಲಿಗೆ ಬಂದಿತ್ತು.
ಇಡಿ ಅಧಿಕಾರಿಗಳು ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳನ್ನು ಮತ್ತು ಆರೋಪಿಗಳು ಅಕ್ರಮ ಹಣದಲ್ಲಿ ಖರೀದಿಸಿದ್ದ ಸ್ಥಿರಾಸ್ತಿಗಳ ವಿವರಗಳನ್ನು ಕಲೆಹಾಕಿದ್ದಾರೆ. ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಈ ವಾರ ಘಟಾನುಘಟಿಗಳೇ ನಾಮಿನೇಟ್ | ಬಿಗ್‌ಬಾಸ್ ಮನೆಯಿಂದ ಯಾರಿಗೆ ಗೇಟ್‌ಪಾಸ್?



















