ಬೆಂಗಳೂರು: ನಿಮಗೆ ಲೋನ್ ಬೇಕಾ? ಕ್ರೆಡಿಟ್ ಕಾರ್ಡ್ ಬೇಕಾ? ನಿಮಗೊಂದು ಪಾರ್ಸೆಲ್ ಬಂದಿದೆ, ಒಟಿಪಿ ಹೇಳ್ತೀರಾ ಅಂತ ಕರೆ ಮಾಡಿ ಜೀವ ತಿನ್ನುವ, ವಂಚನೆ ಮಾಡುವ ಸ್ಪ್ಯಾಮ್ (Spam) ಕರೆಗಳು ಬರುತ್ತಿವೆಯೇ? ಹಾಗಾದರೆ, ಆ ಸಂಖ್ಯೆಗಳನ್ನು ಬರೀ ಬ್ಲ್ಯಾಕ್ ಲಿಸ್ಟ್ ಗೆ ಹಾಕಿ ಸುಮ್ಮನಿರದಿರಿ. ಬದಲಾಗಿ, ಆ ಸಂಖ್ಯೆಗಳ ಕುರಿತು ದೂರು ನೀಡಿ ಎಂದು ಗ್ರಾಹಕರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (Trai) ಸೂಚನೆ ನೀಡಿದೆ.
ಹೌದು, ಇತ್ತೀಚೆಗೆ ಮೊಬೈಲ್ ಮೂಲಕ ಜನರ ಹಣವನ್ನು ಲಪಟಾಯಿಸುವ ಪ್ರಕರಣಗಳು ಜಾಸ್ತಿಯಾಗಿರುವ ಕಾರಣ ಟ್ರಾಯ್ ಗ್ರಾಹಕರಿಗೆ ಹಲವು ಸೂಚನೆ ನೀಡಿದೆ. “ನಿಮಗೆ ಅನವಶ್ಯಕವಾಗಿ ಕರೆ ಮಾಡುವವರು, ಸ್ಪ್ಯಾಮ್ ಕರೆಗಳು, ಎಸ್ ಎಂಎಸ್ ಗಳು, ವಾಟ್ಸ್ ಆ್ಯಪ್ ಲಿಂಕ್ ಕಳುಹಿಸುತ್ತಿದ್ದರೆ, ಮೊದಲು ಅಂತಹ ಸಂಖ್ಯೆಗಳ ವಿರುದ್ಧ ದೂರು ನೀಡಬೇಕು. ಕೇವಲ ಆ ಸಂಖ್ಯೆಗಳನ್ನು ಬ್ಲಾಕ್ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ ಅವುಗಳ ವಿರುದ್ಧ Trai DND app ನಲ್ಲಿ ದೂರು ದಾಖಲಿಸಬೇಕು” ಎಂದು ತಿಳಿಸಿದೆ.
21 ಲಕ್ಷ ನಂಬರ್ ಸ್ಥಗಿತ
ಸ್ಪ್ಯಾಮ್ ಕರೆಗಳ ಮೂಲಕ ಜನರಿಗೆ ತೊಂದರೆ ಕೊಡುವ, ವಂಚನೆ ಎಸಗುವವರ ವಿರುದ್ಧ ಟ್ರಾಯ್ ಸಮರ ಸಾರಿದೆ. ಇದೇ ಕಾರಣಕ್ಕಾಗಿ ಕಳೆದ ಒಂದು ವರ್ಷದಲ್ಲಿ ಶಂಕಾಸ್ಪದ ಕರೆಗಳನ್ನು ಮಾಡುವ 21 ಲಕ್ಷ ಮೊಬೈಲ್ ನಂಬರ್ ಗಳನ್ನು ಡಿಸ್ ಕನೆಕ್ಟ್ ಮಾಡುವ ಜತೆಗೆ ಬ್ಲಾಕ್ ಮಾಡಲಾಗಿದೆ ಎಂದು ಟ್ರಾಯ್ ಮಾಹಿತಿ ನೀಡಿದೆ. ಡಿಎನ್ ಡಿ ಆ್ಯಪ್ ನಲ್ಲಿ ನೀಡಿದ ದೂರುಗಳ ಅನ್ವಯ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದೆ.
ಲೋನ್, ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಕರೆ ಮಾಡುವ ವಂಚಕರು ಜನರಿಗೆ ಹಲವು ರೀತಿಯಲ್ಲಿ ವಂಚಿಸುತ್ತಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿ ಕಳೆದುಕೊಂಡವರ ನಿದರ್ಶನಗಳೂ ಇವೆ. ಹಾಗಾಗಿ, ವಂಚಕರ ವಿರುದ್ಧ ಟ್ರಾಯ್ ಸಮರ ಸಾರಿದೆ. ಇದಕ್ಕೆ ಬೆಂಬಲ ಸೂಚಿಸಲು ಜನ ಡಿಎನ್ ಡಿ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡು, ದೂರು ನೀಡಬಹುದಾಗಿದೆ.
ಇದನ್ನೂ ಓದಿ; ಪಿಎಫ್ ಸಂಬಳದ ಮಿತಿ 25 ಸಾವಿರಕ್ಕೆ ಏರಿಕೆ : ಕೋಟ್ಯಂತರ ಉದ್ಯೋಗಿಗಳಿಗೆ ಗುಡ್ ನ್ಯೂಸ್



















