ಬೆಂಗಳೂರು: ಮನೆ ಕಟ್ಟಿಸುವುದು, ಅಪಾರ್ಟ್ ಮೆಂಟ್ ಖರೀದಿ, ಕಾರು ಖರೀದಿ, ಉನ್ನತ ಶಿಕ್ಷಣ ಸೇರಿ ಹಲವು ಕಾರಣಗಳಿಗಾಗಿ ಬ್ಯಾಂಕ್ ಗಳಿಂದ ಸಾಲ ಪಡೆಯುತ್ತೇವೆ. ಹೀಗೆ ಸಾಲ ಪಡೆಯುವಾಗ ಬ್ಯಾಂಕುಗಳು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲಗಾರರಿಂದ ಸಹಿ ಮಾಡಿದ ಬ್ಲ್ಯಾಂಕ್ ಚೆಕ್ ಅನ್ನು ಪಡೆಯುತ್ತವೆ. ಆದರೆ, ಹೀಗೆ ಬ್ಲ್ಯಾಂಕ್ ಚೆಕ್ ನೀಡುವುದು ಕಡ್ಡಾಯವೇ? ಯಾವ ಸಾಲಕ್ಕೆ ಮಾತ್ರ ಬ್ಲ್ಯಾಂಕ್ ಚೆಕ್ ಪಡೆಯಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಬ್ಲ್ಯಾಂಕ್ ಚೆಕ್ ಪಡೆಯೋದು ಏಕೆ?
ಸಾಲದ ಸುರಕ್ಷತೆ ದೃಷ್ಟಿಯಿಂದ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಬ್ಲ್ಯಾಂಕ್ ಚೆಕ್ ಪಡೆಯುತ್ತವೆ. ಸಾಲ ಪಡೆದವರು ಸರಿಯಾದ ಸಮಯಕ್ಕೆ ಇಎಂಐ ಪಾವತಿಸದಿದ್ದರೆ, ಸಾಲದ ಕಂತುಗಳನ್ನು ಕಟ್ಟುವುದು ನಿಲ್ಲಿಸಿದರೆ, ಬ್ಲ್ಯಾಂಕ್ ಚೆಕ್ ನಲ್ಲಿ ಸಾಲದ ಮೊತ್ತವನ್ನು ನಮೂದಿಸಿ, ಸಾಲ ವಸೂಲಿ ಮಾಡಲು ಬ್ಯಾಂಕುಗಳು ಚೆಕ್ ಪಡೆಯುತ್ತವೆ.
ಬ್ಲ್ಯಾಂಕ್ ಚೆಕ್ ಪಡೆಯುವ ದಿಸೆಯಲ್ಲಿ ಆರ್ ಬಿ ಐ ಯಾವುದೇ ನಿಯಮ ರೂಪಿಸಿಲ್ಲ. ಇದನ್ನು ಬ್ಯಾಂಕುಗಳ ವಿವೇಚನೆಗೇ ಬಿಡಲಾಗಿದೆ. ಹಾಗಾಗಿ, ಕೆಲ ಬ್ಯಾಂಕುಗಳು ಬ್ಲ್ಯಾಂಕ್ ಚೆಕ್ ಪಡೆಯುತ್ತವೆ. ಇನ್ನೂ ಕೆಲವು ಬ್ಯಾಂಕುಗಳು ಪಡೆಯುವುದಿಲ್ಲ. ಹಾಗಾಗಿ, ಸಾಲ ಪಡೆಯುವಾಗ ಬ್ಯಾಂಕ್ ನ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಇದಲ್ಲದೆ, ಎಲ್ಲ ಸಂದರ್ಭಗಳಲ್ಲೂ ಈ ಕಡ್ಡಾಯವಲ್ಲ. ಅಂದರೆ, ನೀವು ವೈಯಕ್ತಿಕ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಿದಾಗಲೆಲ್ಲ ಖಾಲಿ ಚೆಕ್ ನೀಡಬೇಕು ಎಂಬುದಿಲ್ಲ. ಅದರಲ್ಲೂ, ವಿಶೇಷವಾಗಿ ಚಿನ್ನದ ಸಾಲಗಳಂತಹ ಭದ್ರತಾ ಸಾಲಗಳಲ್ಲಿ, ಖಾಲಿ ಚೆಕ್ ಅಗತ್ಯವಿಲ್ಲ. ಏಕೆಂದರೆ, ಆ ಸಂದರ್ಭಗಳಲ್ಲಿ ಚಿನ್ನವೇ ಈಗಾಗಲೇ ಭದ್ರತೆಯಾಗಿ ಬ್ಯಾಂಕ್ ಬಳಿ ಇರುತ್ತದೆ. ಹಾಗಾಗಿ, ನೀವು ಖಾಲಿ ಚೆಕ್ ನೀಡುವುದು ಕಡ್ಡಾಯವಲ್ಲ.



















