ಬರೇಲಿ: ಪರಪುರುಷನ ಸ್ನೇಹ ಬೆಳೆಸಿದ್ದ ಮಹಿಳೆಯೊಬ್ಬರು ಆತನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗಲೇ ಆತನ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಘಟನೆ ಸಂಬಂಧ 32 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಕರನ ಬೆದರಿಕೆಯಿಂದ ರೋಸಿ ಹೋಗಿ ಈ ಕೃತ್ಯವೆಸಗಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.
ಹತ್ಯೆಗೀಡಾದ ವ್ಯಕ್ತಿಯನ್ನು ಇಕ್ಬಾಲ್ ಎಂದು ಗುರುತಿಸಲಾಗಿದೆ. 2 ದಿನಗಳ ಹಿಂದೆ ಮನೆಯ ಸಮೀಪದಲ್ಲೇ ಈತನ ಮೃತದೇಹ ಪತ್ತೆಯಾಗಿತ್ತು. “ಇಕ್ಬಾಲ್ ಕರಕುಶಲ ಕರ್ಮಿಯಾಗಿ ಕೆಲಸ ಮಾಡುತ್ತಿದ್ದ. ಆಗಾಗ ನಮ್ಮ ಊರಿಗೂ ಕೆಲಸದ ನಿಮಿತ್ತ ಬರುತ್ತಿದ್ದ. ಹೀಗಾಗಿ ನಮ್ಮಿಬ್ಬರ ನಡುವೆ ಸಂಪರ್ಕ ಬೆಳೆದು, ಪರಸ್ಪರ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡು, ಫೋನ್ ಮೂಲಕ ಸಂಭಾಷಣೆ ನಡೆಸುತ್ತಿದ್ದೆವು.
ಒಂದು ದಿನ, ಇಕ್ಬಾಲ್ ನನ್ನನ್ನು ಅವನ ಮನೆಗೆ ಕರೆಸಿಕೊಂಡು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ. ನಂತರದಲ್ಲಿ ಪದೇ ಪದೇ ಸೆಕ್ಸ್ ಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ನಾನು ನನ್ನ ಪತಿಗೆ ಈ ವಿಚಾರ ತಿಳಿಸುವುದಾಗಿ ಅವನಿಗೆ ಹೇಳಿದೆ. ಆಗ ಕೋಪಗೊಂಡ ಆತ ನನ್ನೊಂದಿಗೆ ಮಾತನಾಡಿದ ಕಾಲ್ ರೆಕಾರ್ಡಿಂಗ್ ತನ್ನ ಬಳಿಯಿರುವುದಾಗಿಯೂ, ಅದನ್ನು ನನ್ನ ಪತಿಗೆ ಕಳುಹಿಸುವುದಾಗಿಯೂ ನನಗೆ ಬೆದರಿಕೆಯೊಡ್ಡಿದ. ನನಗೆ ಸಣ್ಣ ಮಕ್ಕಳಿರುವ ಕಾರಣ ನಾನು ಗೊಂದಲಕ್ಕೀಡಾದೆ. ಬಳಿಕ ಹಲವು ಬಾರಿ ನನ್ನನ್ನು ಬ್ಲ್ಯಾಕ್ ಮೇಲ್ ಮಾಡಿ ಇಕ್ಬಾಲ್ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ. ಇದರಿಂದ ನಾನು ರೋಸಿಹೋಗಿದ್ದೆ.
ಹೇಗಾದರೂ ಮಾಡಿ ಈ ಸಂಬಂಧದಿಂದ ದೂರವಾಗಬೇಕೆಂದು ಬಯಸಿದ್ದೆ” ಎಂದು ಆರೋಪಿ ಮಹಿಳೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. “ಕಳೆದ ಬುಧವಾರ, ಇಕ್ಬಾಲ್ ತನ್ನ ಹೆಂಡತಿಯನ್ನು ಆಕೆಯ ತವರುಮನೆಗೆ ಬಿಟ್ಟು ಬರಲೆಂದು ಹೋಗಿದ್ದ. ಅವನು ವಾಪಸ್ ಬರುವ ಸಂದರ್ಭದಲ್ಲಿ ಅವನಿಗೆ ನಾನೇ ಕರೆ ಮಾಡಿ, ಭೇಟಿಯಾಗುವಂತೆ ತಿಳಿಸಿದೆ. ಅವನು ಕೂಡಲೇ ಬಂದು, ನನ್ನ ಕೈಗೆ 2 ನಿದ್ರೆ ಮಾತ್ರೆಗಳನ್ನು ಕೊಟ್ಟು, ನಿನ್ನ ಪತಿಗೆ ಇದನ್ನು ಟೀ ಜೊತೆ ಬೆರೆಸಿ ಕೊಡು ಎಂದು ಸೂಚಿಸಿದ.
ಅದರಂತೆ, ರಾತ್ರಿ 8 ಗಂಟೆ ವೇಳೆಗೆ ನಾನು ನನ್ನ ಪತಿಗೆ ಟೀ ಕಪ್ ನಲ್ಲಿ ಆ ಮಾತ್ರೆಗಳನ್ನು ಬೆರೆಸಿಕೊಟ್ಟೆ. ಅವರು ಅಲ್ಲೇ ನಿದ್ರೆಗೆ ಜಾರಿದರು. ರಾತ್ರಿ 11.40ರ ಸಮಯಕ್ಕೆ ನಾನು ನೇರವಾಗಿ ಇಕ್ಬಾಲ್ ಮನೆಗೆ ಹೋದೆ. ಅವನು ಮನೆಯಲ್ಲಿ ಒಬ್ಬಂಟಿಯಾಗಿದ್ದ. ಇಂದು ಒಂದೋ ನಾನೇ ಸಾಯುತ್ತೇನೆ ಅಥವಾ ಅವನನ್ನು ಕೊಲ್ಲುತ್ತೇನೆ ಎಂದು ನಿರ್ಧರಿಸಿದ್ದೆ. ಮನೆಗೆ ಹೋದೊಡನೆ ಅವನೊಂದಿಗೆ ದೈಹಿಕ ಸಂಪರ್ಕಕ್ಕೆ ಮುಂದಾದೆ. ಆತನ ಎದೆಯ ಮೇಲೆ ಕುಳಿತು, ಒಂದು ಕೈಯ್ಯಲ್ಲಿ ಬಾಯಿಗಳನ್ನು ಮುಚ್ಚಿ, ಮತ್ತೊಂದರಲ್ಲಿ ಕತ್ತು ಹಿಸುಕಿದೆ.
ಅವನು ಸತ್ತಿದ್ದು ದೃಢಪಟ್ಟ ಬಳಿಕ ಮೃತದೇಹವನ್ನು ಮೆಟ್ಟಿಲಿನವರೆಗೆ ಎಳೆದೊಯ್ದು, ಕೆಳಗೆ ತಂದು ಬಳಿಕ ಮನೆಗೆ ವಾಪಸ್ ಬಂದೆ. ಆತನ ಬ್ಲ್ಯಾಕ್ ಮೇಲ್ ನಿಂದ ನಾನು ರೋಸಿಹೋಗಿದ್ದೆ. ನನ್ನ ಮಕ್ಕಳು, ಕುಟುಂಬವನ್ನು ಉಳಿಸಿಕೊಳ್ಳಬೇಕೆಂದರೆ ಅವನನ್ನು ಕೊಲ್ಲದೇ ಬೇರೆ ದಾರಿಯಿರಲಿಲ್ಲ” ಆಕೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.