ನವದೆಹಲಿ: ಹರಿಯಾಣ ಫಲಿತಾಂಶ ಈ ಬಾರಿ ಬಿಜೆಪಿಗೆ ವಿರೋಧವಾಗಿರಲಿದೆ ಎಂದೇ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಬಿಜೆಪಿ ಮಾತ್ರ ಆ ಭವಿಷ್ಯಗಳನ್ನೆಲ್ಲ ಸುಳ್ಳು ಮಾಡಿ ಹ್ಯಾಟ್ರಿಕ್ ಎಂಬಂತೆ ಅಧಿಕಾರದ ಗದ್ದುಗೆ ಏರಿದೆ. ಈ ಮೂಲಕ ಹರಿಯಾಣದಲ್ಲಿ ಬಿಜೆಪಿಯ ಪ್ರಯೋಗ ಕೈ ಹಿಡಿದಿದೆ.
90 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆದ್ದಿದೆ. ಬಹುಮತಕ್ಕೆ 46 ಸ್ಥಾನಗಳು ಬೇಕು. ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾಯಿಸಿದ್ದು, ಬಿಜೆಪಿಗೆ ವರದಾನವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಇಡೀ ಕ್ಯಾಬಿನೆಟ್ ರಾಜೀನಾಮೆ ನೀಡಿದ ನಂತರ ನಯಾಬ್ ಸಿಂಗ್ ಸೈನಿ ಅವರನ್ನು ಹೊಸ ಸಿಎಂ ಆಗಿ 2024ರ ಲೋಕಸಭೆ ಚುನಾವಣೆಗೆ ಮುನ್ನ ಘೋಷಿಸಲಾಯಿತು. ಖಟ್ಟರ್ ಸಿಎಂ ಆಗಿ ನಾಲ್ಕೂವರೆ ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಜೆಪಿ ಸಮ್ಮಿಶ್ರ ಸರ್ಕಾರ ನಡೆಯುತ್ತಿತ್ತು. ಆದರೆ, ಚುನಾವಣೆ ಪೂರ್ವದಲ್ಲಿ ಬಿಜೆಪಿ ಹೊಸ ದಾಳ ಉರುಳಿಸಿತು. ಹೀಗಾಗಿ ಇದು ಬಿಜೆಪಿಯ ಕೈ ಹಿಡಿಯುವಂತಾಯಿತು.
ಗುಜರಾತ್ ನಲ್ಲಿ ಕೂಡ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾಯಿಸಿ ಚುನಾವಣೆಯಲ್ಲಿ ಗೆದ್ದಿತ್ತು. ತ್ರಿಪುರಾ, ಉತ್ತರಾಖಂಡ ಹೀಗೆ ಹಲವು ರಾಜ್ಯಗಳಲ್ಲಿ ಸಿಎಂಗಳನ್ನು ಬದಲಾಯಿಸಿ ಗೆದ್ದು ಬೀಗಿದೆ. ಕರ್ನಾಟಕದಲ್ಲಿ ಮಾತ್ರ ಬಿಜೆಪಿಯ ಈ ತಂತ್ರ ಫಲಿಸಿರಲಿಲ್ಲ. ಈಗ ಹರಿಯಾಣದಲ್ಲಿ ಮತ್ತೆ ತನ್ನ ತಂತ್ರದ ಮೂಲಕ ಗೆಲುವು ಸಾಧಿಸಿದೆ.
ಹರಿಯಾಣದಲ್ಲಿ ನಯಾಬ್ ಸೈನಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏಕೆಂದರೆ ಅವರು 6 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಸೈನಿ ಈ ವರ್ಷದ ಮಾರ್ಚ್ ನಲ್ಲಿ ಖಟ್ಟರ್ ಅವರ ಬದಲಾಗಿ ಸಿಎಂ ಹುದ್ದೆಗೇರಿದ್ದರು.