ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ನಾಯಕರ ಸಭೆ ಕರೆದಿದ್ದಾರೆ.
ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಹೊರ ಬೀಳುತ್ತಿದ್ದು, ಸದ್ಯದ ಟ್ರೆಂಡ್ ಪ್ರಕಾರ 46 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಬಿಜೆಪಿಯು ಮೂರನೇ ಅವಧಿಗೆ ಹರಿಯಾಣದಲ್ಲಿ ಸರ್ಕಾರ ರಚಿಸುವುದು ಪಕ್ಕಾ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಪಕ್ಕಾ ಎನ್ನಲಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಹರಿಯಾಣದ ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಚುನಾವಣಾ ಪ್ರಚಾರ ಪ್ರಾರಂಭವಾಗುವ ಮೊದಲೇ ಬಿಜೆಪಿ ನಯಾಬ್ ಸಿಂಗ್ ಸೈನಿ ಅವರನ್ನು ಹರಿಯಾಣದ ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಸ್ವತಂತ್ರವಾಗಿ ಸರ್ಕಾರ ರಚಿಸುವ ಸಾಧ್ಯತೆಯೂ ದಟ್ಟವಾಗಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು ಭಾರಿ ಜಯಭೇರಿ ಬಾರಿಸುವ ನಿರೀಕ್ಷೆ ಹೆಚ್ಚಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ರಾಷ್ಟ್ರ ರಾಜಧಾನಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.