ತಿರುವನಂತಪುರಂ : ಕೇರಳ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ, ಚುನಾವಣಾ ಆಯೋಗದ ಅಧಿಕೃತ ಪತ್ರವೊಂದರಲ್ಲಿ ಬಿಜೆಪಿಯ ಸೀಲು (Seal) ಕಂಡುಬಂದಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಗಂಭೀರ ಲೋಪವನ್ನು “ಕ್ಲೆರಿಕಲ್ ತಪ್ಪು”(ತಾಂತ್ರಿಕ ಲೋಪ) ಎಂದು ಸಮಜಾಯಿಷಿ ನೀಡಿರುವ ಆಯೋಗವು, ತಕ್ಷಣವೇ ಕ್ರಮ ಕೈಗೊಂಡು ಸಹಾಯಕ ವಿಭಾಗೀಯ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ.
ಮಾರ್ಚ್ 19, 2019ರ ಹಳೆಯ ನಿರ್ದೇಶನಕ್ಕೆ ಸಂಬಂಧಿಸಿದ ಅಫಿಡವಿಟ್‌ವೊಂದನ್ನು ಚುನಾವಣಾ ಆಯೋಗವು ಇತ್ತೀಚೆಗೆ ರಾಜಕೀಯ ಪಕ್ಷಗಳಿಗೆ ರವಾನಿಸಿತ್ತು. ಈ ಪತ್ರದಲ್ಲಿ ಆಯೋಗದ ಅಧಿಕೃತ ಮುದ್ರೆಯ ಬದಲಿಗೆ ಕೇರಳ ಬಿಜೆಪಿ ಘಟಕದ ಸೀಲು ಇರುವುದನ್ನು ಸಿಪಿಎಂ ಪಕ್ಷವು ಸಾಮಾಜಿಕ ಜಾಲತಾಣವಾದ ‘ಎಕ್ಸ್'(ಟ್ವೀಟರ್)ನಲ್ಲಿ ಬಹಿರಂಗಪಡಿಸಿದೆ. “ಚುನಾವಣಾ ಆಯೋಗ ಮತ್ತು ಬಿಜೆಪಿ ಒಂದೇ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿವೆಯೇ? ಕನಿಷ್ಠ ಎರಡು ಪ್ರತ್ಯೇಕ ಡೆಸ್ಕ್‌ಗಳನ್ನು ಹೊಂದುವ ಸೌಜನ್ಯವನ್ನಾದರೂ ತೋರಿ” ಎಂದು ಸಿಪಿಎಂ ವ್ಯಂಗ್ಯವಾಡಿದೆ. ಕಾಂಗ್ರೆಸ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ಆಯೋಗವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂಬ ತನ್ನ ಆರೋಪಕ್ಕೆ ಈ ಪ್ರಕರಣವೇ ಸಾಕ್ಷಿ ಎಂದೂ ಆರೋಪಿಸಿದೆ.

ಆಯೋಗದ ಸ್ಪಷ್ಟನೆ ಏನು?
ಈ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಕೇರಳ ಮುಖ್ಯ ಚುನಾವಣಾಧಿಕಾರಿ (CEO), ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಪ್ರಕಟಿಸುವ ಕುರಿತು ಬಿಜೆಪಿ ಇತ್ತೀಚೆಗೆ ಆಯೋಗದಿಂದ ಸ್ಪಷ್ಟನೆ ಕೇಳಿತ್ತು. ಈ ವೇಳೆ ಬಿಜೆಪಿ ಸಲ್ಲಿಸಿದ್ದ 2019ರ ದಾಖಲೆಯ ಫೋಟೋಕಾಪಿಯಲ್ಲಿ ಈಗಾಗಲೇ ಪಕ್ಷದ ಸೀಲು ಇತ್ತು. ಆಫೀಸ್ ಸಿಬ್ಬಂದಿ ಗಮನಿಸದೆ ಅದೇ ಪತ್ರವನ್ನು ಸ್ಕ್ಯಾನ್ ಮಾಡಿ ಇತರ ರಾಜಕೀಯ ಪಕ್ಷಗಳಿಗೆ ರವಾನಿಸಿದ್ದಾರೆ. ಇದು ಕೇವಲ ಒಂದು “ಕ್ಲೆರಿಕಲ್ ಎಡವಟ್ಟು” ಎಂದು ಆಯೋಗ ಸಮರ್ಥಿಸಿಕೊಂಡಿದೆ.
ಅಧಿಕಾರಿಯ ಅಮಾನತು
ಈ ಲೋಪಕ್ಕೆ ಕಾರಣರಾದ ಸಹಾಯಕ ವಿಭಾಗೀಯ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮಾರ್ಚ್ 21 ರಂದೇ ಈ ತಪ್ಪನ್ನು ಪತ್ತೆಹಚ್ಚಿ, ಸಂಬಂಧಪಟ್ಟ ಪತ್ರವನ್ನು ಹಿಂಪಡೆದು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸರಿಯಾದ ದಾಖಲೆಯನ್ನು ಕಳುಹಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳು ದಾರಿ ತಪ್ಪಿಸುವ ಸುದ್ದಿಗಳನ್ನು ಹರಡಬಾರದು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.
ಇದನ್ನೂ ಓದಿ : ಅಲ್ಲು ಅರ್ಜುನ್ ಸಿನಿಮಾ ಪ್ರೇರಣೆ.. ರಕ್ತ ಚಂದನ ಮಾರಾಟ ಮಾಡಲು ಬಂದ ಕಿರಾತಕ ಅರೆಸ್ಟ್!



















