ಮುಂಬೈ/ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಎಐ ಶೃಂಗಸಭೆ’ (India AI Impact Summit) ಕಾರ್ಯಕ್ರಮಕ್ಕೆ ನುಗ್ಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅರೆಬೆತ್ತಲೆ ಪ್ರತಿಭಟನೆಯನ್ನು ಖಂಡಿಸಿ, ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಇದರ ಭಾಗವಾಗಿ ಇಂದು ಮಹಾರಾಷ್ಟ್ರದ ಮುಲುಂಡ್‌ನಲ್ಲಿ ಕಾಂಗ್ರೆಸ್ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಶ್ಯೂರಿಟಿ ನೀಡಲು ರಾಹುಲ್ ಗಾಂಧಿ ಅವರು ಥಾಣೆಗೆ ತೆರಳುತ್ತಿದ್ದಾಗ ಮುಲುಂಡ್‌ನಲ್ಲಿ ಈ ಘಟನೆ ನಡೆದಿದೆ. ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ರಾಹುಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಮಹಾತ್ಮ ಗಾಂಧೀಜಿಯವರ ಹತ್ಯೆಯ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಪ್ರತಿಭಟನಾಕಾರರು ‘ಲಷ್ಕರ್-ಎ-ರಾಹುಲ್’ ಎಂಬ ಫಲಕಗಳನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐ ಶೃಂಗಸಭೆಯಲ್ಲಿ ನಡೆದಿದ್ದೇನು?
ಶುಕ್ರವಾರವಷ್ಟೇ ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯ ವೇದಿಕೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆಯಾಗಿ ನುಗ್ಗಿ ಗದ್ದಲ ಎಬ್ಬಿಸಿದ್ದರು. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆ ಕೂಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಭದ್ರತಾ ವ್ಯವಸ್ಥೆಯನ್ನು ಮೀರಿ ಕ್ಯೂಆರ್ ಕೋಡ್‌ಗಳ (QR Code) ಮೂಲಕ ಒಳನುಗ್ಗಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕಪ್ಪು ಛತ್ರಿಗಳ ಮೂಲಕ ಪ್ರತಿಭಟಿಸಲು ಮೊದಲು ಯೋಜಿಸಿದ್ದ ಇವರು, ನಂತರ ಟಿ-ಶರ್ಟ್ ಮೇಲೆ ಸ್ಟಿಕ್ಕರ್ ಅಂಟಿಸಿ ಒಳನುಗ್ಗಿದ್ದರು ಎನ್ನಲಾಗಿದೆ.
ದೇಶದ ವರ್ಚಸ್ಸಿಗೆ ಧಕ್ಕೆ: ಬಿಜೆಪಿ ಆಕ್ರೋಶ
ಈ ಘಟನೆಯನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ತೀವ್ರವಾಗಿ ಖಂಡಿಸಿದ್ದು, ಇದು “ಕಾಂಗ್ರೆಸ್‌ನ ಪರಮ ನಿರ್ಲಜ್ಜತನ” ಎಂದು ಕರೆದಿದ್ದಾರೆ. ಭಾರತವು ಜಾಗತಿಕವಾಗಿ ತಂತ್ರಜ್ಞಾನದ ಶಕ್ತಿಯಾಗಿ ಬೆಳೆಯುತ್ತಿರುವಾಗ, ಇಂತಹ ಕೃತ್ಯಗಳ ಮೂಲಕ ದೇಶದ ವರ್ಚಸ್ಸು ಹಾಳು ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಘಟನೆ ಬೆನ್ನಲ್ಲೇ ದೆಹಲಿಯಲ್ಲಿ ಶುಕ್ರವಾರವೇ ರಾಹುಲ್ ಗಾಂಧಿ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇಂದು ದೆಹಲಿ, ಸೂರತ್, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ರಾಜಕೀಯ ಸಂಘರ್ಷ ತಾರಕಕ್ಕೇರಿದೆ.
ಇದನ್ನೂ ಓದಿ : ಟ್ರಂಪ್‌ಗೆ ಸುಪ್ರೀಂ ಕೋರ್ಟ್ ಶಾಕ್ ಬೆನ್ನಲ್ಲೇ ಭಾರತದ ಮೇಲಿನ ಸುಂಕ ಶೇ.10ಕ್ಕೆ ಇಳಿಕೆ



















