ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕೈವಾಡವಿರುವ ಆರೋಪವಿದೆ. ಹೀಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಕಲಬುರಗಿಯ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಬಿಜೆಪಿ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು, ಮನೆ ಮುಂದೆ ರೆಡ್ ಕಾರ್ಪೆಟ್ ಹಾಸಿ ಪಾನಿಯ ವ್ಯವಸ್ಥೆ ಮಾಡಿ ಬರಮಾಡಿಕೊಳ್ಳಲು ಮುಂದಾಗಿದ್ದಾರೆ.
ಇತ್ತೀಚೆಗಷ್ಟೇ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ನನ್ನ ಮನೆಗೆ ಮುತ್ತಿಗೆ ಹಾಕಲಿ. ನಾನೇ ಚಹಾ ಪಾನೀಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಅದರಂತೆ ಸಚಿವ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು, ಪ್ರತಿಭಟನಾಕಾರರಿಗೆ ಚಹಾ, ಮಜ್ಜಿಗೆ, ಎಳೆ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಇಂದು ಬಿಜೆಪಿ ನಾಯಕರು ಕಲಬುರಗಿಯತ್ತ ಹೊರಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.