ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಕಾರಣಕ್ಕೆ ಮೂಡಾ ಹಗರಣ ಹಾಗೂ ವಾಲ್ಮೀಕಿ ನಿಗಮದಲ್ಲಾದ ಅಕ್ರಮ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಆಗಸ್ಟ್ 3ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡಿದೆ. ಆದರೆ, ಇದಕ್ಕೆ ಸ್ವ ಪಕ್ಷದವರೇ ಕಿಡಿಕಾರಿದ್ದಾರೆ. ಇದು ಬಿಜೆಪಿಯ ಮುಜುಗರಕ್ಕೆ ಕಾರಣವಾಗುತ್ತಿದೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾಯಕತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ. ವಿರೋದ ಪಕ್ಷಗಳ ಪಾದಯಾತ್ರೆಗೆ ಆರಂಭಿಕ ಹಂತದಲ್ಲೇ ವಿಘ್ನಗಳು ಎದುರಾಗುತ್ತಿವೆ. ಅದರಲ್ಲೂ ಆಡಳಿತ ಪಕ್ಷದಿಂದಲೇ ಅಡ್ಡಿ, ಆತಂಕ ಎದುರಾಗುತ್ತಿರುವುದಕ್ಕೆ ತೀವ್ರ ಮುಜುಗರ ಎದುರಾಗಿದೆ.
ಆಗಸ್ಟ್ 3 ರಿಂದ ಆರಂಭಗೊಳ್ಳುವ ಪಾದಯಾತ್ರೆಗೆ ಬಿಜೆಪಿ ಹಾಗೂ ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಯಶಸ್ವಿ ಮಾಡಲು ಹಲವಾರು ರೀತಿಯಲ್ಲಿ ಸರ್ಕಸ್ ಮಾಡುತ್ತಿದೆ. ಪಾದಯಾತ್ರೆ ನಡೆಸುವ ನಿಟ್ಟಿನಲ್ಲಿ ಹಲವಾರು ಸುತ್ತಿನ ಸಭೆಗಳು ಕೂಡ ನಡೆದಿವೆ. ಆದರೆ, ಪಾದಯಾತ್ರೆಯನ್ನು ಬಿಜೆಪಿಯ ಇಬ್ಬರು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಾದಯಾತ್ರೆಯ ಉದ್ದೇಶವನ್ನೇ ಪ್ರಶ್ನೆ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿ ಆರೋಪಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಆದೇಶದಂತೆ ಬಿವೈ ವಿಜಯೇಂದ್ರ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆಯ ಹಿಂದೆ ಹೊಂದಾಣಿಕೆ ರಾಜಕಾರಣ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮುಡಾ ಹಗರಣದ ವಿರುದ್ಧ ಸದನದಲ್ಲಿ ಬಿಜೆಪಿ ಆಹೋರಾತ್ರಿ ಧರಣಿ ನಡೆಸುವಾಗಲೂ ಯತ್ನಾಳ್ ಆರೋಪಿಸಿದ್ದರು. ಇನ್ನೊಂದೆಡೆ ಯತ್ನಾಳ್ ಜೊತೆ ರಮೇಶ್ ಜಾರಕಿಹೊಳಿ ಕೂಡ ಧ್ವನಿಗೂಡಿಸಿದ್ದಾರೆ. ಅಲ್ಲದೇ, ಪರ್ಯಾಯವಾಗಿ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಹೈಕಮಾಂಡ್ ಅನುಮತಿ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಡಿಕೆಶಿ ಆದೇಶದಂತೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಯತ್ನಾಳ್ ಆರೋಪ ಮಾಡಿದರೆ, ಮತ್ತೊಂದು ಕಡೆಯಲ್ಲಿ ಒಂದು ಕಾಲದ ಸಿದ್ದರಾಮಯ್ಯ ಆಪ್ತ ರಮೇಶ್ ಜಾರಕಿಹೊಳಿ ಕೇವಲ ಸಿದ್ದರಾಮಯ್ಯ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಇದು ರಾಜಕೀಯ ದ್ವೇಷದಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಮಳೆ ಹಾನಿಯಿಂದ ಸಾಕಷ್ಟು ಹಾನಿ ಉಂಟಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ತೀವ್ರಗೊಂಡಿದೆ. ಇಂತಹ ಸಂದರ್ಭದಲ್ಲಿ ವಿಪಕ್ಷವಾಗಿ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮೊದಲು ಭೇಟಿ ಕೊಡಬೇಕು. ಆದರೆ ವಿರೋಧ ಪಕ್ಷದ ನಾಯಕರು ಪ್ರವಾಹ ಸಮಸ್ಯೆಗಿಂತ ರಾಜಕೀಯ ಉದ್ದೇಶದ ಪಾದಯಾತ್ರೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಈ ಇಬ್ಬರೂ ನಾಯಕರು ಆರೋಪಿಸಿದ್ದಾರೆ.