ನವದೆಹಲಿ: ರಾಷ್ಟ್ರ ರಾಜಧಾನಿಯ 12 ವಾರ್ಡ್‌ಗಳಿಗೆ ನಡೆದ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಉಪಚುನಾವಣೆಯಲ್ಲಿ ಬಿಜೆಪಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಆಮ್ ಆದ್ಮಿ ಪಕ್ಷ (ಎಎಪಿ) 3 ಸ್ಥಾನಗಳಲ್ಲಿ ಜಯ ಗಳಿಸಿದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್, ಈ ಉಪಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ .
ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಫಲಿತಾಂಶ ಸಮಾಧಾನ ತಂದಿದೆ. ಆದರೆ, ಉಪಚುನಾವಣೆಗೂ ಮುನ್ನ ತನ್ನ ತೆಕ್ಕೆಯಲ್ಲಿದ್ದ 9 ಸ್ಥಾನಗಳ ಪೈಕಿ ಎರಡನ್ನು ಬಿಜೆಪಿ ಕಳೆದುಕೊಂಡಿರುವುದು ಪಕ್ಷಕ್ಕೆ ಆದ ಸಣ್ಣ ಹಿನ್ನಡೆಯೆಂದೇ ವಿಶ್ಲೇಷಿಸಲಾಗುತ್ತಿದೆ. ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ (ಎಐಎಫ್‌ಬಿ) ಕೂಡ ಒಂದು ಸ್ಥಾನದಲ್ಲಿ (ಚಾಂದಿನಿ ಮಹಲ್) ಗೆಲುವು ಸಾಧಿಸಿದೆ.
ಬಿಜೆಪಿ-ಆಪ್ ನಡುವೆ ವಾರ್ಡ್‌ಗಳ ಅದಲು-ಬದಲು
ಉಪಚುನಾವಣೆಯಲ್ಲಿ ಕುತೂಹಲಕಾರಿ ಬೆಳವಣಿಗೆಯೆಂದರೆ ಉಭಯ ಪಕ್ಷಗಳು ಪರಸ್ಪರರ ಭದ್ರಕೋಟೆಗಳಿಗೆ ಲಗ್ಗೆ ಇಟ್ಟಿರುವುದು. 2022ರ ಚುನಾವಣೆಯಲ್ಲಿ ಎಎಪಿ ಗೆದ್ದಿದ್ದ ಪ್ರತಿಷ್ಠಿತ ಚಾಂದಿನಿ ಚೌಕ್ ವಾರ್ಡ್ ಅನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಬಿಜೆಪಿಯ ಸುಮನ್ ಗುಪ್ತಾ ಇಲ್ಲಿ ಜಯಗಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, 2022ರಲ್ಲಿ ಬಿಜೆಪಿ ಗೆದ್ದಿದ್ದ ನಾರಾಯಣ ವಾರ್ಡ್ ಅನ್ನು ಎಎಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ .
ಮುಖ್ಯಮಂತ್ರಿಗೆ ಸತ್ವಪರೀಕ್ಷೆ, ಕಾಂಗ್ರೆಸ್‌ಗೆ ಜೀವದಾನ
ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಇದು ಮೊದಲ ಜನಪ್ರಿಯತೆಯ ಪರೀಕ್ಷೆಯಾಗಿತ್ತು. ಅವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಮತ್ತು ಈಗ ಶಾಸಕಿಯಾಗಿ ಆಯ್ಕೆಯಾಗಿರುವ ಕಾರಣ ತೆರವಾಗಿದ್ದ ‘ಶಾಲಿಮಾರ್ ಬಾಗ್ ಬಿ’ ವಾರ್ಡ್ ಅನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಅನಿತಾ ಜೈನ್ ಗೆಲುವು ಸಾಧಿಸಿದ್ದಾರೆ.
ಇತ್ತ ಕಾಂಗ್ರೆಸ್ ಪಾಲಿಗೂ ಈ ಚುನಾವಣೆ ಮಹತ್ವದ್ದಾಗಿತ್ತು. ಸಂಗಮ್ ವಿಹಾರ್-ಎ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಚೌಧರಿ ಅವರು ಬಿಜೆಪಿ ಅಭ್ಯರ್ಥಿಯನ್ನು 3,628 ಮತಗಳ ಅಂತರದಿಂದ ಸೋಲಿಸುವ ಮೂಲಕ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ. “ಬಿಜೆಪಿಯ ನಾಯಕರು ಮತ್ತು ಸ್ವತಃ ಮುಖ್ಯಮಂತ್ರಿಗಳೇ ಪ್ರಚಾರಕ್ಕೆ ಬಂದಿದ್ದರೂ ಅಭಿವೃದ್ಧಿಯ ಹೆಸರಲ್ಲಿ ಮತ ಕೇಳಲಿಲ್ಲ. ಜನ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ,” ಎಂದು ಚೌಧರಿ ಪ್ರತಿಕ್ರಿಯಿಸಿದ್ದಾರೆ .
ಪಾಲಿಕೆಯಲ್ಲಿ ಬಲಾಬಲ ಹೇಗಿದೆ?
ಈ ಉಪಚುನಾವಣೆಯ ನಂತರವೂ ಪಾಲಿಕೆಯಲ್ಲಿ ಬಿಜೆಪಿಯ ನಿಯಂತ್ರಣವೇ ಮುಂದುವರಿಯಲಿದೆ. 250 ಸದಸ್ಯ ಬಲದ ಸದನದಲ್ಲಿ ಪ್ರಸ್ತುತ ಪಕ್ಷಗಳ ಬಲಾಬಲ ಈ ಕೆಳಗಿನಂತಿದೆ:
ಬಿಜೆಪಿ: 122 ಸ್ಥಾನಗಳು
ಆಪ್: 102 ಸ್ಥಾನಗಳು
ಕಾಂಗ್ರೆಸ್: 09 ಸ್ಥಾನಗಳು
ಎಎಪಿಯ ರಾಮ್ ಸ್ವರೂಪ್ ಕನ್ನೋಜಿಯಾ ಅವರು ದಕ್ಷಿಣಪುರಿ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದು, ತಮ್ಮ ಗೆಲುವನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ಅರ್ಪಿಸಿದ್ದಾರೆ. ಗ್ರೇಟರ್ ಕೈಲಾಶ್ ಮತ್ತು ಅಶೋಕ್ ವಿಹಾರ್ ವಾರ್ಡ್‌ಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ .
ಇದನ್ನೂ ಓದಿ : ‘ನಾಮದಾರ್’ ಕಾಂಗ್ರೆಸ್‌ಗೆ ‘ ಕಾಮದಾರ್’ ಪ್ರಧಾನಿಯನ್ನು ಸಹಿಸಲಾಗುತ್ತಿಲ್ಲ : ಕಾಂಗ್ರೆಸ್ ನಾಯಕಿಯ ಎಐ ವಿಡಿಯೋ ವಿವಾದ



















