ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಇಂದು 43ನೇ ವರ್ಷದ ಹುಟ್ಟು ಹಬ್ಬ. ಹೀಗಾಗಿ ಅಬಿಮಾನಿಗಳು ತಮ್ಮ ಆಪ್ತನ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.
ಹಲವೆಡೆ ಅಭಿಮಾನಿಗಳು ಈ ಹುಟ್ಟು ಹಬ್ಬವನ್ನು ಭಾರೀ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆಂಧ್ರಪದೇಶದ ವಿಜಯವಾಡದ ಧೋನಿ ಫ್ಯಾನ್ಸ್ ಮುಗಿಲೆತ್ತರಕ್ಕೆ ಕಟೌಟ್ ನಿಲ್ಲಿಸಿದ್ದಾರೆ. ಬರೋಬ್ಬರಿ 100 ಅಡಿ ಕಟೌಟ್ ನಿರ್ಮಿಸಿ ಅಭಿಮಾನಿಗಳು ವಿಶ್ ಮಾಡಿದ್ದಾರೆ.
ಮಾಜಿ ನಾಯಕನ 100 ಅಡಿಯ ಬೃಹತ್ ಕಟೌಟ್ ನಿಲ್ಲಿಸುವ ಮೂಲಕ ವಿಜಯವಾಡ ಧೋನಿ ಫ್ಯಾನ್ಸ್ ಹುಟ್ಟು ಹಬ್ಬದ ಸಂಭ್ರಮ ಆಚರಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧೋನಿ ಫ್ಯಾನ್ಸ್ ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿವೆ.
2004ರಲ್ಲಿ ಭಾರತ ತಂಡ ಸೇರಿದ ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 90 ಟೆಸ್ಟ್ ಪಂದ್ಯಗಳನ್ನಾಡಿದ್ದ ಧೋನಿ 1 ದ್ವಿಶತಕ ಹಾಗೂ 6 ಶತಕ, 33 ಅರ್ಧ ಶತಕಗಳೊಂದಿಗೆ ಒಟ್ಟು 4876 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 350 ಪಂದ್ಯಗಳನ್ನಾಡಿದ್ದ ಧೋನಿ, 10 ಶತಕ ಮತ್ತು 73 ಅರ್ಧಶತಕಗಳೊಂದಿಗೆ ಒಟ್ಟು 10,773 ರನ್ ಗಳಿಸಿದ್ದಾರೆ. ಭಾರತದ ಪರ 98 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮಹೇಂದ್ರ ಸಿಂಗ್ ಧೋನಿ 2 ಅರ್ಧ ಶತಕಗಳೊಂದಿಗೆ ಒಟ್ಟು 1,617 ರನ್ ಗಳಿಸಿದ್ದಾರೆ.
ಧೋನಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಆದರೆ ಕಳೆದ ಸೀಸನ್ ನಲ್ಲಿ ಚೆನ್ನೈ ತಂಡದ ನಾಯಕತ್ವ ತೊರೆದಿರುವ ಕಾರಣ ಅವರು ಮುಂದಿನ ಸೀಸನ್ನಲ್ಲಿ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅಭಿಮಾನಿಗಳು ಮಾತ್ರ ಇನ್ನೂ ಧೋನಿ ಆಟ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.