ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ದೇಶಾದ್ಯಂತ ಆಸ್ಪತ್ರೆಗಳಿಗೆ 1.21 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಬಿಲ್‌ಗಳು ಪಾವತಿಯಾಗದೆ ಬಾಕಿ ಉಳಿದಿವೆ ಎಂದು ಭಾರತೀಯ ವೈದ್ಯಕೀಯ ಸಂಘ (IMA) ಗಂಭೀರ ಕಳವಳ ವ್ಯಕ್ತಪಡಿಸಿದೆ.
ಯೋಜನೆಯಡಿಯಲ್ಲಿ ಚಿಕಿತ್ಸಾ ಪ್ಯಾಕೇಜ್‌ಗಳ ದರಗಳು ತೀರಾ ಕಡಿಮೆಯಾಗಿದ್ದು, ವಿಶೇಷವಾಗಿ ಖಾಸಗಿ ತೃತೀಯ ಹಂತದ ಆಸ್ಪತ್ರೆಗಳಲ್ಲಿ ಸಂಕೀರ್ಣ ಚಿಕಿತ್ಸೆಗಳ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಐಎಂಎ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸಲ್ಲಿಸಿದ ಶ್ವೇತಪತ್ರದಲ್ಲಿ ಎತ್ತಿ ತೋರಿಸಿದೆ.
ಶುಕ್ರವಾರ ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, ಆಯುಷ್ಮಾನ್ ಭಾರತ್ ಯೋಜನೆಯಡಿ ಈವರೆಗೆ 9.84 ಕೋಟಿಗೂ ಹೆಚ್ಚು ಆಸ್ಪತ್ರೆ ದಾಖಲಾತಿಗಳಿಗೆ ಅನುಮೋದನೆ ನೀಡಲಾಗಿದ್ದು, 1.40 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಪಾವತಿಸಲಾಗಿದೆ. ಈ ಯೋಜನೆಯು ದೇಶದ ಸುಮಾರು 55 ಕೋಟಿ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ (ಶೇ. 40ರಷ್ಟು ಜನಸಂಖ್ಯೆ) ವಾರ್ಷಿಕ 5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆ ನೀಡುವ ಗುರಿ ಹೊಂದಿದೆ.
ದೇಶಾದ್ಯಂತ 41 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದ್ದು, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು (5.33 ಕೋಟಿ) ಕಾರ್ಡ್‌ಗಳನ್ನು ವಿತರಿಸಲಾಗಿದೆ.
ಐಎಂಎ ಪ್ರಸ್ತಾಪಿಸಿದ ಅಂಶಗಳೇನು?:
ಬಾಕಿ ಪಾವತಿ: ಅಜಯ್ ಬಸುದೇವ್ ಬೋಸ್ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಯ ಪ್ರಕಾರ, ದೇಶಾದ್ಯಂತ 64 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ 1.21 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಕ್ಲೇಮ್‌ಗಳು ಇನ್ನೂ ಇತ್ಯರ್ಥವಾಗಿಲ್ಲ.
ವಿಳಂಬ: ಗುಜರಾತ್‌ನಲ್ಲಿ 2021ರಿಂದ 2023ರವರೆಗೆ 300 ಕೋಟಿ ರೂ. ಮೊತ್ತದ ಕ್ಲೇಮ್‌ಗಳು ಬಾಕಿ ಉಳಿದಿವೆ. ಕೇವಲ ಶೇ.5ರಷ್ಟು ಕ್ಲೇಮ್‌ಗಳು ಮಾತ್ರ ನಿಗದಿತ 15 ದಿನಗಳಲ್ಲಿ ಇತ್ಯರ್ಥಗೊಂಡಿವೆ. ಕೇರಳದಲ್ಲಿ 400 ಕೋಟಿ ರೂ. ಬಾಕಿ ಇದೆ.
ಕಡಿಮೆ ದರಗಳು: ಚಿಕಿತ್ಸೆಗಾಗಿ ನಿಗದಿಪಡಿಸಿದ ದರಗಳು ವಾಸ್ತವಿಕ ವೆಚ್ಚವನ್ನು ಸರಿದೂಗಿಸುವುದಿಲ್ಲ. ಇದರಿಂದಾಗಿ ದೆಹಲಿಯ 1,000ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 67 ಆಸ್ಪತ್ರೆಗಳು ಮಾತ್ರ ಯೋಜನೆಯಲ್ಲಿ ಭಾಗವಹಿಸುತ್ತಿವೆ.
ಸಂಕೀರ್ಣ ಪ್ರಕ್ರಿಯೆ: ಕ್ಲೇಮ್ ಸಲ್ಲಿಕೆ ಪ್ರಕ್ರಿಯೆಗಳು ಜಟಿಲವಾಗಿದ್ದು, ತಾಂತ್ರಿಕ ದೋಷಗಳಿಂದ ಕ್ಲೇಮ್‌ಗಳು ತಿರಸ್ಕೃತಗೊಳ್ಳುತ್ತಿವೆ. ಇದು ಆಸ್ಪತ್ರೆಗಳ ಆದಾಯ ನಷ್ಟಕ್ಕೆ ಕಾರಣವಾಗಿದೆ.
ಐಎಂಎ ಶಿಫಾರಸುಗಳು:
ಪಾವತಿಗಳನ್ನು ಸ್ವಯಂಚಾಲಿತಗೊಳಿಸಬೇಕು ಮತ್ತು ಪಾರದರ್ಶಕತೆಗಾಗಿ ರಿಯಲ್-ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು. ಚಿಕಿತ್ಸೆಯ ನೈಜ ವೆಚ್ಚಕ್ಕೆ ಅನುಗುಣವಾಗಿ ದರಗಳನ್ನು ಪರಿಷ್ಕರಿಸಬೇಕು. ಕ್ಲೇಮ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಮತ್ತು ವಾಟ್ಸ್ ಆ್ಯಪ್, ಎಸ್‌ಎಂಎಸ್ ಮೂಲಕ 24/7 ಡಿಜಿಟಲ್ ಬೆಂಬಲ ನೀಡಬೇಕು. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಗಳನ್ನು ಸ್ಥಾಪಿಸಬೇಕು. ಮಾನ್ಯತೆ ಪಡೆದ ಮತ್ತು ಗ್ರಾಮೀಣ ಆಸ್ಪತ್ರೆಗಳಿಗೆ ಹೆಚ್ಚಿನ ಪಾವತಿ ಮತ್ತು ತ್ವರಿತ ಅನುಮೋದನೆಗಳ ಮೂಲಕ ಪ್ರೋತ್ಸಾಹ ನೀಡಬೇಕು. ದಕ್ಷತೆ ಸುಧಾರಿಸಲು ಮಧ್ಯವರ್ತಿಗಳನ್ನು ತಪ್ಪಿಸಿ, ಫಿನ್‌ಟೆಕ್ ಬಳಸಿ ನೇರ ನಗದು ವರ್ಗಾವಣೆ ವ್ಯವಸ್ಥೆಗೆ ಬದಲಾಗಬೇಕು.
ಯೋಜನೆಯ ಅನುಷ್ಠಾನದಲ್ಲಿ ಸವಾಲುಗಳಿವೆ ಎಂದು ಸಚಿವ ಪ್ರತಾಪ್ರಾವ್ ಜಾಧವ್ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಸುಧಾರಣೆಗಳನ್ನು ಮಾಡದಿದ್ದರೆ, ಭಾರತದ ಬಡವರಿಗೆ ಉಚಿತ, ಗುಣಮಟ್ಟದ ಆರೋಗ್ಯ ಸೇವೆ ನೀಡುವ ಯೋಜನೆಯ ಮೂಲ ಉದ್ದೇಶವೇ ಅಪಾಯಕ್ಕೆ ಸಿಲುಕಲಿದೆ ಎಂದೂ ವೈದ್ಯರು ಎಚ್ಚರಿಸಿದ್ದಾರೆ.



















