ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಿಸಲು ಕೆಲವರು ಒತ್ತಾಯಿಸಿದ್ದಕ್ಕೆ ನನ್ನ ವಿರೋಧವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳೂರು ಶಕ್ತಿ ಕೇಂದ್ರ. ಹಾಗೆಂದ ಮಾತ್ರಕ್ಕೆ ಆ ಹೆಸರನ್ನು ಜಿಲ್ಲೆಯ ಸುಳ್ಯ, ಪುತ್ತೂರು ಮೇಲೆ ಹೇರುವುದಕ್ಕೆ ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.
ಸರ್ ಥಾಮಸ್ ಮನ್ನೊ ಸಾಕಷ್ಟು ಸಂಶೋಧನೆ ಮಾಡಿ ಕೆನರಾ ಎಂದು ಕರೆದ ಜಿಲ್ಲೆ ಇದು. ಮುಂದೆ ಸೌತ್ ಕೆನರಾ, ನಾರ್ತ್ ಕೆನರಾ ಆಯಿತು. ಈಗ ದಕ್ಷಿಣ ಕನ್ನಡ ಆಗಿದೆ. ಮತ್ತೆ ಹೆಸರು ಬದಲಾವಣೆ ಅಗತ್ಯವಿಲ್ಲ. ತುಳುನಾಡು ಎಂದು ಕರೆದರೂ ಮಂಗಳೂರು ತುಳು ಬೇರೆ, ಸುಳ್ಯ ತುಳು ಬೇರೆ. ಹಾಗಾಗಿ ದಕ್ಷಿಣ ಕನ್ನಡ ಹೆಸರೇ ಇರಲಿ. ರಾಜ್ಯದ ಇತರೆಡೆ ಹೊಸ ಜಿಲ್ಲೆ ಮಾಡುವಾಗ ಹೆಸರು ಬದಲಿಸಲು ಒಂದು ಅವಕಾಶ ಇರುತ್ತದೆ. ದಕ್ಷಿಣ ಕನ್ನಡಕ್ಕೆ ಅಂತಹ ಸಂದರ್ಭ ಇಲ್ಲ ಎಂದಿದ್ದಾರೆ.
ಯಾವುದೇ ಸ್ಥಳ ಮತ್ತು ಊರಿಗೆ ಐತಿಹಾಸಿಕ ಮಹತ್ವ ಇರುತ್ತದೆ. ಈಗ ಹೆಸರು ಬದಲಿಸುವ ಪ್ರಕ್ರಿಯೆಗೆ ನನ್ನ ವಿರೋಧವಿದೆ ಎಂದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.