ಬೆಂಗಳೂರು:ರಾಜಧಾನಿಯಲ್ಲಿ ನಡೆದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಅವರ ಪತ್ತೆಗಾಗಿ ಸಿಐಡಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ.
ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದ ಶಾಸಕ ಬೈರತಿ ಬಸವರಾಜು ಅವರು ಅಲ್ಲಿಂದಲೇ ಮಹಾರಾಷ್ಟ್ರ ಅಥವಾ ಗೋವಾಕ್ಕೆ ತೆರಳಿದ್ದು, ಅಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಐಡಿಯ 3 ತಂಡಗಳು ಅವರಿಗಾಗಿ 2-3 ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ. ಈ ಮಧ್ಯೆ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ.
ಎಲ್ಲ ವಿಮಾನ ನಿಲ್ದಾಣಗಳ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಲುಕ್ ಔಟ್ ನೋಟಿಸ್ ನೀಡಲು ಮುಂದಾಗಿದ್ದಾರೆ. ಜತೆಗೆ ರೈಲು ನಿಲ್ದಾಣಗಳಿಗೂ ಮಾಹಿತಿ ನೀಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಬಸವರಾಜು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕೆಆರ್ ಪುರದಲ್ಲಿರುವ ನಿವಾಸದಲ್ಲೂ ಬೈರತಿ ಬಸವರಾಜ್ ಇಲ್ಲ. ಬೆಳಗಾವಿಯಲ್ಲಿ ನಡೆದ ವಿಧಾನಸಬೆ ಅಧಿವೇಶನದಲ್ಲಿ ಮೊದಲ ವಾರ ಕಲಾಪಕ್ಕೆ ಬೈರತಿ ಬಸವರಾಜ್ ಹಾಜರಾಗಿದ್ದರು. ನಂತರ ಅಧಿವೇಶನಕ್ಕೆ ಗೈರಾಗಿದ್ದರು.
ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಒಳಸಂಚು ನಡೆಸಿರುವ ಆರೋಪ ಎದುರಿಸುತ್ತಿರುವ ಬೈರತಿ ಬಸವರಾಜ್, ಮೊದಲು ಪೊಲೀಸರ ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿರುವುದು ಪತ್ತೆಯಾಗಿತ್ತು. ಕೊಲೆ ಕೇಸ್‌ನಲ್ಲಿ ಬಸವರಾಜ್ ಭಾಗಿಯಾಗಿರುವುದರ ಬಗ್ಗೆ ಸಾಕ್ಷ್ಯಗಳಿವೆ ಎಂದು ಹೈಕೋರ್ಟ್‌ನಲ್ಲಿ ಎಸ್‌ಪಿಪಿ ಜಗದೀಶ್ ವಾದಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಜಾಮೀನು ಅರ್ಜಿ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ಬಂಧನ ಮಾಡಲು ಸಿಐಡಿ ಟೀಂ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ದೇಶದ ಇತಿಹಾಸದಲ್ಲೇ ಕಾಂಗ್ರೆಸ್ ಯಾರನ್ನು ದಲಿತ ಸಿಎಂ ಮಾಡಿಲ್ಲ | ಎ.ನಾರಾಯಣಸ್ವಾಮಿ


















