ಪಾಟ್ನಾ: ಕಾರ್ಯಕ್ರಮವೊಂದರಲ್ಲಿ ಮ್ಯೂಸಿಕ್ ಸಿಸ್ಟಂ ಹಾಳಾಗಿದ್ದಕ್ಕೆ ಮಾಟಮಂತ್ರ ಕಾರಣ ಎಂದು ಆರೋಪಿಸಿದ ಘಟನೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರದ ನವಾಡಾ ಜಿಲ್ಲೆಯಲ್ಲಿ ನಡೆದ ಮೌಢ್ಯಾಚರಣೆಯ ಘೋರ ಘಟನೆ ಇದು.
ಪಾರ್ಟಿಯೊಂದರಲ್ಲಿ ಮ್ಯೂಸಿಕ್ ಸಿಸ್ಟಮ್ ಪದೇ ಪದೇ ನಿಂತುಹೋದಿದ್ದಕ್ಕೆ ದಂಪತಿಯೇ ಮಾಟಮಂತ್ರ ಮಾಡಿರುವುದಾಗಿ ಆರೋಪಿಸಿ, ಗ್ರಾಮಸ್ಥರು ದಂಪತಿಯ ಮೇಲೆ ದಾಳಿ ನಡಸಿದ್ದಾರೆ. ವ್ಯಕ್ತಿಯೊಬ್ಬರನ್ನು ಎಲ್ಲರೂ ಸೇರಿ ಸಾಮೂಹಿಕವಾಗಿ ಥಳಿಸಿ ಹತ್ಯೆಗೈದಿದ್ದು, ಅವರ ಪತ್ನಿಯ ಮೇಲೂ ಬರ್ಬರವಾಗಿ ಹಲ್ಲೆ ನಡೆಸಲಾಗಿದೆ.
ಮೃತರನ್ನು 55 ವರ್ಷದ ಗಯಾ ಮಾಂಝಿ ಎಂದು ಗುರುತಿಸಲಾಗಿದೆ. ಅವರ ಪತ್ನಿ ಸಮುದ್ರಿ ಮಾಂಝಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗಿದ್ದೇನು?
ಮಂಗಳವಾರ ರಾತ್ರಿ, ಆರೋಪಿ ಮೋಹನ್ ಮಾಂಝಿ ಎಂಬಾತನ ಮನೆಯಲ್ಲಿ ಜನ್ಮದಿನದ ಪಾರ್ಟಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಡಿಜೆ ಮ್ಯೂಸಿಕ್ ಸಿಸ್ಟಮ್ ಪದೇ ಪದೇ ಆಫ್ ಆಗುತ್ತಿತ್ತು. ಇದಕ್ಕೆ ಗಯಾ ಮಾಂಝಿ ಮತ್ತು ಅವರ ಪತ್ನಿ ಸಮುದ್ರಿ ಮಾಂಝಿ ಮಾಡಿದ ಮಾಟಮಂತ್ರವೇ ಕಾರಣ ಎಂದು ಪಾರ್ಟಿಯಲ್ಲಿದ್ದವರು ಆರೋಪಿಸಿದ್ದಾರೆ.
ತಕ್ಷಣವೇ, ಗುಂಪೊಂದು ದಂಪತಿಯ ಮನೆಗೆ ನುಗ್ಗಿ ಅವರನ್ನು ಹೊರಗೆಳೆದು ತಂದು ಮಾರಣಾಂತಿಕವಾಗಿ ಥಳಿಸಿದೆ. ಇದು ಕೇವಲ ಹಲ್ಲೆಗಷ್ಟೇ ಸೀಮಿತವಾಗದೆ, ಗುಂಪು ಅಮಾನವೀಯವಾಗಿ ವರ್ತಿಸಿದೆ. ದಂಪತಿಯ ತಲೆ ಬೋಳಿಸಿ, ಅವರಿಗೆ ಬೂಟು ಮತ್ತು ಚಪ್ಪಲಿಗಳ ಹಾರ ಹಾಕಿ, ಮೂತ್ರ ಕುಡಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಗಯಾ ಮಾಂಝಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಯಾ ಮಾಂಝಿ ಅವರ ಶವವನ್ನು ಸುಡಲು ತೆಗೆದುಕೊಂಡು ಹೋಗುತ್ತಿದ್ದ ಆರೋಪಿಗಳನ್ನು ತಡೆದಿದ್ದಾರೆ. ಇದೇ ವೇಳೆ, ಗ್ರಾಮಸ್ಥರು ಗಯಾ ಅವರ ಪತ್ನಿ ಸಮುದ್ರಿ ಮಾಂಝಿ ಅವರನ್ನೂ ಜೀವಂತವಾಗಿ ಸುಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿಯೂ ಬಹಿರಂಗವಾಗಿದೆ.
“ನಾವು ಸ್ಥಳಕ್ಕೆ ತಲುಪಿದಾಗ ಪತಿ ಮೃತಪಟ್ಟಿದ್ದರು ಮತ್ತು ಪತ್ನಿಯನ್ನು ಜೀವಂತವಾಗಿ ಸುಡಲು ಗುಂಪು ಸಿದ್ಧತೆ ನಡೆಸಿತ್ತು. ನಾವು ತಕ್ಷಣ ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ಗಾಯಾಳು ಸಮುದ್ರಿ ಮಾಂಝಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಮೋಹನ್ ಮಾಂಝಿ ಮತ್ತು ಒಂಬತ್ತು ಮಹಿಳೆಯರು ಸೇರಿದಂತೆ ಒಟ್ಟು 17 ಜನರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.



















