ಪಾಟ್ನಾ : “ಎನ್‌ಕೌಂಟರ್ ಮಾಡಲು ಧೈರ್ಯವಿದೆಯೇ, ಹಾಗಿದ್ದರೆ ಸಮಯ ಮತ್ತು ಸ್ಥಳ ನಿಗದಿ ಮಾಡಿ ಬನ್ನಿ” ಎಂದು ಪೊಲೀಸರಿಗೇ ಬಹಿರಂಗ ಸವಾಲು ಹಾಕಿದ್ದ ಬಿಹಾರದ ಕುಖ್ಯಾತ ಗ್ಯಾಂಗ್‌ಸ್ಟರ್ ಕುಂದನ್ ಠಾಕೂರ್, ಈಗ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಬಿಹಾರದ ಮೋತಿಹಾರಿಯಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಈತ ಸೇರಿದಂತೆ ಇಬ್ಬರು ಅಪರಾಧಿಗಳನ್ನು ಪೊಲೀಸರು ಹತ್ಯೆಗೈದಿದ್ದಾರೆ. ದುರದೃಷ್ಟವಶಾತ್, ಈ ಕಾರ್ಯಾಚರಣೆಯ ವೇಳೆ ಕರ್ತವ್ಯನಿರತ ಪೊಲೀಸ್ ಪೇದೆ ಕೂಡ ಹುತಾತ್ಮರಾಗಿದ್ದಾರೆ.
ಆಡಿಯೋ ಕ್ಲಿಪ್‌ನಲ್ಲಿ ಸವಾಲು ಹಾಕಿದ್ದ ಕಿರಾತಕ
ಈ ಎನ್‌ಕೌಂಟರ್ ನಡೆಯುವುದಕ್ಕೆ ಕೇವಲ 2 ದಿನಗಳ ಮುನ್ನ ಕುಂದನ್ ಠಾಕೂರ್ ಚಕಿಯಾ ಪೊಲೀಸ್ ಠಾಣೆಯ ಅಧಿಕಾರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾದ ಆಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಧೈರ್ಯವಿದ್ದರೆ ನನ್ನನ್ನು ಎನ್‌ಕೌಂಟರ್ ಮಾಡಿ. ಪೊಲೀಸರು ಹೇಳಿದ ಜಾಗಕ್ಕೆ ನಾನು ಬರುತ್ತೇನೆ. ಸಮಯ ಮತ್ತು ಸ್ಥಳವನ್ನು ನೀವೇ ನಿಗದಿಪಡಿಸಿ. ಅಂದು 10 ರಿಂದ 15 ಪೊಲೀಸರು ಸಾಯುವುದು ಗ್ಯಾರಂಟಿ, ಆದರೆ ನಾನು ಮಾತ್ರ ಸಿಗುವುದಿಲ್ಲ. ಒಬ್ಬ ಗ್ಯಾಂಗ್‌ಸ್ಟರ್ ಅಂದರೆ ಏನು ಎಂಬುದನ್ನು ನಾನು ನಿಮಗೆ ತೋರಿಸುತ್ತೇನೆ” ಎಂದು ಅಹಂಕಾರದಿಂದ ಹೇಳಿದ್ದ. ತನ್ನ ಕುಟುಂಬಕ್ಕೆ ತೊಂದರೆ ನೀಡಿದರೆ ಪೊಲೀಸರ ಕುಟುಂಬವನ್ನೂ ಸುಮ್ಮನೆ ಬಿಡುವುದಿಲ್ಲ ಎಂದೂ ಆತ ಎಚ್ಚರಿಸಿದ್ದ.
ತಡರಾತ್ರಿ ನಡೆದ ಭೀಕರ ಕಾರ್ಯಾಚರಣೆ
ಇದರ ಬೆನ್ನಲ್ಲೇ ಕುಂದನ್ ಠಾಕೂರ್ ಇರುವ ಸ್ಥಳದ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ಪೊಲೀಸ್ ತಂಡವು ತಡರಾತ್ರಿ ಮೋತಿಹಾರಿಯ ಅಡಗುತಾಣವನ್ನು ಸುತ್ತುವರಿಯಿತು. ಪೊಲೀಸರು ಶರಣಾಗುವಂತೆ ಸೂಚಿಸಿದರೂ, ಅಪರಾಧಿಗಳು ಏಕಾಏಕಿ ಗುಂಡಿನ ಮಳೆಗರೆದರು. ಈ ವೇಳೆ ನಡೆದ ಮೊದಲ ಹಂತದ ದಾಳಿಯಲ್ಲಿ ಎಸ್‌ಟಿಎಫ್ (STF) ಜವಾನರೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಕೆರಳಿದ ಪೊಲೀಸ್ ಪಡೆ ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿತು. ಈ ವೇಳೆ ಪೊಲೀಸರ ಗುಂಡಿಗೆ ಕುಂದನ್ ಠಾಕೂರ್ ಮತ್ತು ಆತನ ಮತ್ತೊಬ್ಬ ಸಹಚರ ಸ್ಥಳದಲ್ಲೇ ಹತರಾಗಿದ್ದಾರೆ.
ಪೂರ್ವ ಚಂಪಾರಣ್ ಎಸ್‌ಪಿ ಸ್ವರ್ಣ ಪ್ರಭಾತ್ ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ಠಾಕೂರ್ ಬಂಧನಕ್ಕೆ ಹಲವಾರು ಪ್ರಯತ್ನಗಳು ನಡೆದಿದ್ದವು ಎಂದು ತಿಳಿಸಿದ್ದಾರೆ. ಈ ಘಟನೆಯಲ್ಲಿ ಧೀರ ಪೊಲೀಸ್ ಪೇದೆಯನ್ನು ಕಳೆದುಕೊಂಡಿರುವುದು ಇಲಾಖೆಗೆ ದೊಡ್ಡ ನಷ್ಟವಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಈ ಗ್ಯಾಂಗ್‌ಸ್ಟರ್‌ಗೆ ಆಶ್ರಯ ನೀಡಿದ್ದ ಮನೆಯ ಮಾಲೀಕ ಉಜ್ವಲ್ ಕುಮಾರ್ ಮತ್ತು ಆತನ ತಂದೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ಸರಣಿ ಅಪಘಾತ.. ಹಲವರಿಗೆ ಗಾಯ!



















