ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ಇತ್ತೀಚೆಗೆ ನಡೆದ ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ ಘಟನೆ ಇಂದು ಬೆಳಗಿನ ಜಾವ ಪಾಟ್ನಾ ನಗರದ ಮಾಲ್ ಸಲಾಮಿ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ವಿಕಾಸ್ ಉರ್ಫ್ ರಾಜಾ ಎಂದು ಗುರುತಿಸಲಾಗಿದ್ದು, ಇವನು ಗೋಪಾಲ್ ಖೇಮ್ಕಾ ಅವರ ಹತ್ಯೆಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದ ಎಂದು ಶಂಕಿಸಲಾಗಿದೆ.
ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾದ ಗಾಂಧಿ ಮೈದಾನದ ಸಮೀಪದ ಪನಾಚೆ ಹೊಟೇಲ್‌ನ ಬಳಿಯಿರುವ ತಮ್ಮ ನಿವಾಸದ ಹೊರಗೆ ಜುಲೈ 4 ರಂದು ರಾತ್ರಿ 11:40ರ ಸುಮಾರಿಗೆ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೊಬ್ಬನಿಂದ ಗುಂಡಿಕ್ಕಿ ಕೊಲೆಗೈದಿದ್ದ. ಖೇಮ್ಕಾ ಅವರು ಮಗಧ್ ಆಸ್ಪತ್ರೆಯ ಮಾಲೀಕರಾಗಿದ್ದು, ಬಿಹಾರದ ಉದ್ಯಮ ವಲಯದಲ್ಲಿ ಭಾರೀ ಹೆಸರು ಪಡೆದ ವ್ಯಕ್ತಿಯಾಗಿದ್ದರು. ಈ ಘಟನೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಎನ್‌ಕೌಂಟರ್ ಹೇಗಾಯ್ತು?
ಗೋಪಾಲ್ ಖೇಮ್ಕಾ ಅವರ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದ ಪಾಟ್ನಾ ಪೊಲೀಸರ ತಂಡ, ಮಂಗಳವಾರ ಬೆಳಗಿನ ಜಾವ, ಮಾಲ್ ಸಲಾಮಿ ಪ್ರದೇಶದಲ್ಲಿ ಆರೋಪಿ ವಿಕಾಸ್ ಉರ್ಫ್ ರಾಜಾನನ್ನು ಬಂಧಿಸಲೆಂದು ತೆರಳಿತ್ತು. ಆದರೆ, ವಿಕಾಸ್ ತಪ್ಪಿಸಿಕೊಳ್ಳಲು ಯತ್ನಿಸಿ, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ವಿಕಾಸ್ ಹತನಾದ ಎಂದು ತಿಳಿಸಿದ್ದಾರೆ. ಆರೋಪಿಯ ಬಳಿಯಿದ್ದ ಒಂದು ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಕಾಸ್ ಈ ಹತ್ಯೆಗೆ ಶಸ್ತ್ರಾಸ್ತ್ರ ಒದಗಿಸಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ತನಿಖೆಯ ಪ್ರಗತಿ
ಗೋಪಾಲ್ ಖೇಮ್ಕಾ ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಒಟ್ಟು 12ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಒಬ್ಬ ಶಂಕಿತನಾದ ರೋಶನ್ ಕುಮಾರ್ ಎಂಬಾತನನ್ನು ಜುಲೈ 6 ರಂದು ಖೇಮ್ಕಾ ಅವರ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಾಗಲೇ ಬಂಧಿಸಲಾಗಿತ್ತು. ತನಿಖೆಯಲ್ಲಿ, ಹತ್ಯೆಗೆ ಮುಂಚೆ ಆರೋಪಿಗಳು ಖೇಮ್ಕಾ ಅವರ ಮನೆಯ ಸುತ್ತಲೂ ಪರಿಶೀಲನೆ ಮಾಡಿ ಹೋಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ಮೂವರು ಭಾಗಿಯಾಗಿದ್ದಾರೆ ಎಂದು ಶಂಕಿಸಿದ್ದು, ಶೂಟರ್‌ಗೆ ಇಬ್ಬರು ಸಹಾಯ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಪ್ರಮುಖ ಶಂಕಿತನ ಬಂಧನ
ಪ್ರಕರಣದ ಪ್ರಮುಖ ಆರೋಪಿಯಾದ ಉಮೇಶ್ ಎಂಬಾತನನ್ನು ಜುಲೈ 7 ರಂದು ಪೊಲೀಸರು ಬಂಧಿಸಿದ್ದಾರೆ. ಉಮೇಶ್, ಬೈಕ್‌ನಲ್ಲಿ ಬಂದು ಖೇಮ್ಕಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಶೂಟರ್ ಎಂದು ಗುರುತಿಸಲಾಗಿದೆ. ಬಿಹಾರ ಬಿಜೆಪಿ ನಾಯಕ ನೀರಜ್ ಕುಮಾರ್, ಈ ಹತ್ಯೆಯನ್ನು ರಾಜಕೀಯ ವ್ಯಕ್ತಿಯೊಬ್ಬರು ಉಮೇಶ್‌ನನ್ನು ಬಳಸಿಕೊಂಡು ನಡೆಸಿದ ಕೊಲೆ ಎಂದು ಆರೋಪಿಸಿದ್ದಾರೆ.
ಗೋಪಾಲ್ ಖೇಮ್ಕಾ ಅವರ ಹತ್ಯೆಯು ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ರಾಜ್ಯದ ಉದ್ಯಮ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. 2025ರ ಮೊದಲಾರ್ಧದಲ್ಲಿ, ಬಿಹಾರದಲ್ಲಿ ಕನಿಷ್ಠ ಎಂಟು ಪ್ರಮುಖ ವ್ಯಾಪಾರಿಗಳು ಇಂತಹ ದಾಳಿಗಳಿಗೆ ಬಲಿಯಾಗಿದ್ದಾರೆ. ಪಾಟ್ನಾದಲ್ಲಿ ಈ ವರ್ಷ 116 ಕೊಲೆಗಳು, 48 ದರೋಡೆಗಳು, 36 ಅತ್ಯಾಚಾರ ಪ್ರಕರಣಗಳು, 10 ಡಕಾಯಿತಿಗಳು, 33 ಸರಗಳ್ಳತನ ಮತ್ತು 13 ದರೋಡೆ ಘಟನೆಗಳು ದಾಖಲಾಗಿವೆ ಎಂಬ ಆಘಾತಕಾರಿ ಅಂಕಿಅಂಶಗಳು ರಾಜ್ಯದ ಭದ್ರತಾ ಲೋಪಗಳನ್ನು ಎತ್ತಿ ತೋರಿಸಿವೆ.
ತನಿಖೆಯ ಹಿನ್ನೆಲೆಯಲ್ಲಿ ಹೊಸ ಆಯಾಮ
ತನಿಖೆಯಲ್ಲಿ, ಈ ಹತ್ಯೆಯು ಭೂ ವಿವಾದಕ್ಕೆ ಸಂಬಂಧಿಸಿದೆ ಎಂದು ಶಂಕಿಸಲಾಗಿದ್ದು, ಬಿಯೂರ್ ಜೈಲಿನಿಂದ ಗ್ಯಾಂಗ್‌ಸ್ಟರ್ ಅಜಯ್ ವರ್ಮಾ ಈ ಕೃತ್ಯವನ್ನು ಯೋಜಿಸಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಕಾಂಟ್ರಾಕ್ಟ್ ಕಿಲ್ಲಿಂಗ್ ಆಯಾಮವನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದುಷ್ಕರ್ಮಿಯೊಬ್ಬ ಖೇಮ್ಕಾ ಅವರ ಕಾರಿನತ್ತ ಓಡಿಬಂದು ಗುಂಡಿನ ದಾಳಿ ನಡೆಸಿ, ನಂತರ ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಂಡಿರುವುದು ದಾಖಲಾಗಿದೆ.
ರಾಜಕೀಯ ಆರೋಪ-ಪ್ರತ್ಯಾರೋಪ
ಈ ಹತ್ಯೆಯು ಬಿಹಾರದ ರಾಜಕೀಯ ವಲಯದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಖೇಮ್ಕಾ ಅವರ ಮಗ ಗುಂಜನ್ ಖೇಮ್ಕಾ ಅವರ ಹತ್ಯೆಯಾದ ಏಳು ವರ್ಷಗಳ ಹಿಂದೆಯೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಈ ದುರ್ಘಟನೆ ತಪ್ಪಿಸಬಹುದಿತ್ತು ಎಂದೂ ಹೇಳಿದ್ದಾರೆ.



















