ಕೊಪ್ಪಳ: ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯಾದ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ಧ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ (Pocso) ದಾಖಲಾಗಿದೆ.
ಗವಿಸಿದ್ದಪ್ಪ ಹತ್ಯೆಗೆ ಕಾರಣ ಎನ್ನಲಾದ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗವಿಸಿದ್ದಪ್ಪ, ಗವಿಸಿದ್ದಪ್ಪ ತಂದೆ ನಿಂಗಜ್ಜ ನಾಯಕ, ತಾಯಿ ದೇವಮ್ಮ, ಸಹೋದರಿ ಅನ್ನಪೂರ್ಣ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಈ ಪ್ರಕರಣವನ್ನು ಎನ್ ಐಎಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಬಾಲಕಿ ತಾಯಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಗವಿಸಿದ್ದಪ್ಪನ ಹತ್ಯೆಯಲ್ಲಿ ನನ್ನ ಮಗಳ ಪಾತ್ರ ಇಲ್ಲವೆಂದು ಧರಣಿ ಕೂತಿದ್ದರು. ಆ. 3ರಂದು ಕೊಪ್ಪಳದಲ್ಲಿನ ಮಸೀದಿ ಮುಂಭಾಗ ಗವಿಸಿದ್ದಪ್ಪ ನಾಯಕ ಎಂಬ 27 ವರ್ಷದ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಾದಿಕ್ ಎಂಬಾತ ಈ ಕೃತ್ಯ ಎಸಗಿ ಪೊಲೀಸರಿಗೆ ಶರಣಾಗಿದ್ದ. ಆಗ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದರು. ಆನಂತರ ಈ ಪ್ರಕರಣ ಹಲವಾರು ತಿರುವುಗಳಿಗೆ ಕಾರಣವಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.



















