ಕೋಲಾರ: ಜಿಲ್ಲೆಯ ಮಾಲೂರು ಗಣಿದಣಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಶಾಕ್ ನೀಡಿದೆ.
40 ಕಲ್ಲು ಗಣಿ ಕ್ವಾರೆಗಳಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಕ್ಕೆ ಇತ್ತೀಚೆಗಷ್ಟೇ ಉಪ ಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿದ್ದರು.
ಏ. 17ರಂದು ದಿಢೀರ್ ಭೇಟಿ ನೀಡಿ ಗಣಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮುಂಜಾಗ್ರತಾ ಕ್ರಮ ಪಾಲಿಸದೆ, ಅಪಾಯ ಮೀರಿ ಆಳದಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ಗಮನಿಸಿ ಕೆಂಡಾಮಂಡಲವಾಗಿದ್ದರು. ಹೀಗಾಗಿ ಆ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಈಗ 40 ಕಲ್ಲು ಕ್ವಾರಿಗಳಲ್ಲಿ ಗಣಿಗಾರಿಕೆ ಬಂದ್ ಮಾಡಲು, ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಉಪಲೋಕಾಯುಕ್ತರು ಭೇಟಿ ವೇಳೆ ಕೆಲ ನಿರ್ಲಕ್ಷ್ಯ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದರು.
ಮಾಲೂರಿನ ಕಲ್ಲು ಕ್ವಾರಿಗಳಲ್ಲಿ ಸುರಕ್ಷತೆಯಿಲ್ಲ, ತಂತಿ ಬೇಲಿ ಅಳವಡಿಸಿಲ್ಲ, ಪರಿಸರಕ್ಕೆ ಹಾನಿಯಾಗುತ್ತಿದೆ. ಗುತ್ತಿಗೆ ಪ್ರದೇಶದ ಗಡಿ ಗುರುತು ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಸರ ಇಲಾಖೆ, ಕಂದಾಯ ಇಲಾಖೆ, ಗಣಿ ಇಲಾಖೆಯ ಪರಿಶೀಲನೆ ಬಳಿಕ ಗಣಿಗಾರಿಕೆ ಪುನರ್ ಆರಂಭಕ್ಕೆ ಸೂಚನೆ ನೀಡಲಾಗುವುದು ಎಂದು ಗಣಿ ಗುತ್ತಿಗೆ ಪಡೆದ 40 ಲೈಸೆನ್ಸ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ನಿಯಮ ಪಾಲನೆಗೆ ಸೂಚನೆ ನೀಡಲಾಗಿದೆ.
ನೋಟಿಸ್ ನೀಡಿರುವ ಕುರಿತು ಕೋಲಾರ ಜಿಲ್ಲಾ ಗಣಿ & ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಕೋದಂಡರಾಮಯ್ಯ ಮಾಹಿತಿ ನೀಡಿದ್ದಾರೆ.



















