ನವದೆಹಲಿ : ಮಧ್ಯಪ್ರಾಚ್ಯ ಯುದ್ಧ ಹಾಗೂ ಇರಾನ್‌ನ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆಯೂ ಭಾರತದ ಇಂಧನ ಭದ್ರತೆಗೆ ದೊಡ್ಡ ರಿಲೀಫ್ ಸಿಕ್ಕಿದೆ. ಸುಮಾರು 46,000 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಹೊತ್ತ ಭಾರತೀಯ ಟ್ಯಾಂಕರ್ ‘ನಂದಾದೇವಿ’ ಇಂದು(ಮಂಗಳವಾರ) ಮುಂಜಾನೆ ಗುಜರಾತ್ ಕರಾವಳಿಯನ್ನು ಸುರಕ್ಷಿತವಾಗಿ ತಲುಪಿದೆ. ಯುದ್ಧದ ಭೀತಿಯ ನಡುವೆಯೂ ಕಳೆದ ಎರಡು ದಿನಗಳಲ್ಲಿ ಭಾರತಕ್ಕೆ ಯಶಸ್ವಿಯಾಗಿ ಆಗಮಿಸಿದ ಎರಡನೇ ಎಲ್‌ಪಿಜಿ ಹಡಗು ಇದಾಗಿದೆ. ಇದಕ್ಕೂ ಮುನ್ನ, ಸೋಮವಾರವಷ್ಟೇ 40,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತಿದ್ದ ‘ಶಿವಾಲಿಕ್’ ಟ್ಯಾಂಕರ್ ಗುಜರಾತ್‌ನ ಮುಂದ್ರಾ ಬಂದರು ತಲುಪಿತ್ತು.
ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯ ಹಾಗೂ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಜಂಟಿ ಕಾರ್ಯಾಚರಣೆ ಹಾಗೂ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಈ ಹಡಗುಗಳ ಸಂಚಾರ ಸುಗಮವಾಗಿದೆ. ಪ್ರಮುಖ ಕಡಲ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ದಾಟಲು ಭಾರತ ಮತ್ತು ಇರಾನ್ ನೌಕಾಪಡೆಗಳು ಅಗತ್ಯ ನೆರವು ಒದಗಿಸಿವೆ ಎಂದು ನಂದಾದೇವಿ ಹಡಗಿನ ಮುಖ್ಯ ಅಧಿಕಾರಿ ತಿಳಿಸಿದ್ದಾರೆ. ಕಳೆದ ತಿಂಗಳು ಆರಂಭವಾದ ಅಮೆರಿಕ-ಇಸ್ರೇಲ್ ಯುದ್ಧಕ್ಕೆ ಪ್ರತಿಯಾಗಿ ಇರಾನ್ ಈ ಜಲಮಾರ್ಗವನ್ನು ನಿರ್ಬಂಧಿಸಿದೆ. ಇರಾನ್‌ನ ಸತತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದಾಗಿ ಕಡಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಜಾಗತಿಕ ತೈಲ ಬೆಲೆಗಳು ಶೇ.40 ರಿಂದ 50ರಷ್ಟು ಏರಿಕೆ ಕಂಡಿವೆ. ಪರಿಣಾಮವೆಂಬಂತೆ, ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಎಲ್ಪಿಜಿ, ಸಿಎನ್‌ಜಿ ಕೊರತೆ ಉಂಟಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ನಡು ಸಮುದ್ರದಲ್ಲೇ ಅನಿಲ ವರ್ಗಾವಣೆ
ಅಧಿಕೃತ ಮಾಹಿತಿಯ ಪ್ರಕಾರ, ನಂದಾದೇವಿ ಹಡಗು ಈ ಮೊದಲು ನಿಗದಿಯಾಗಿದ್ದಂತೆ ಕಾಂಡ್ಲಾ ಬಂದರಿನಲ್ಲಿ ಲಂಗರು ಹಾಕುವುದಿಲ್ಲ. ಬದಲಾಗಿ, ವಾಡಿನಾರ್ ಸಮೀಪದ ನಡುಸಮುದ್ರದಲ್ಲೇ ಈ ಹಡಗಿನಿಂದ ‘ಎಂ.ಟಿ ಬಿಡಬ್ಲ್ಯೂ ಬ್ರೀಜ್’ (MT BW Breeze) ಮತ್ತು ‘ಎಂ.ಟಿ ಜಗ್ ಪ್ರತಾಪ್’ (MT Jag Pratap) ಎಂಬ ಎರಡು ಪ್ರತ್ಯೇಕ ಹಡಗುಗಳಿಗೆ ಎಲ್‌ಪಿಜಿಯನ್ನು ವರ್ಗಾಯಿಸಲಾಗುತ್ತದೆ. ಸಾಗಾಟದ ಸಮಯವನ್ನು ಉಳಿಸುವ ದೃಷ್ಟಿಯಿಂದ, ಅನಿಲ ವರ್ಗಾವಣೆಯಾದ ತಕ್ಷಣವೇ ಈ ಎರಡೂ ಹಡಗುಗಳನ್ನು ನೇರವಾಗಿ ತಮಿಳುನಾಡಿಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರಕ್ಷಿತವಾಗಿ ತಾಯ್ನಾಡಿನತ್ತ ‘ಜಗ್ ಲಾಡ್ಕಿ’
ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಭಾರತ ಸರ್ಕಾರವು ಪ್ರಾದೇಶಿಕ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ಮತ್ತು ನೌಕಾಪಡೆಯ ಸಮನ್ವಯದಂತಹ ಬಿರುಸಿನ ರಾಜತಾಂತ್ರಿಕ ಯತ್ನಗಳನ್ನು ಮುಂದುವರಿಸಿದೆ. ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿ 611 ನಾವಿಕರನ್ನು ಒಳಗೊಂಡ 22 ಭಾರತೀಯ ಹಡಗುಗಳು ಬಾಕಿ ಉಳಿದಿವೆ. ಇದರ ನಡುವೆಯೇ, ಯುಎಇಯಿಂದ ಸುಮಾರು 81,000 ಟನ್ ಕಚ್ಚಾ ತೈಲವನ್ನು ಹೊತ್ತು ತರುತ್ತಿರುವ ‘ಜಗ್ ಲಾಡ್ಕಿ’ (Jag Laadki) ಹಡಗು ಕೂಡ ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳೆಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನದ ಭೀಕರ ವೈಮಾನಿಕ ದಾಳಿ.. 400 ಮಂದಿ ಸಾವು!



















