ಬೆಂಗಳೂರು: 2026ರ ಜನವರಿ 1ರಿಂದ ಜನಸಾಮಾನ್ಯರಿಗೆ ಸಂಬಂಧಿಸಿದ ಹಲವು ಹಣಕಾಸು ನಿಯಮಗಳು ಬದಲಾಗುತ್ತಿವೆ. ಆರ್ ಬಿಐ ಜಾರಿಗೆ ತರುತ್ತಿರುವ ನಿಯಮಗಳ ಜತೆಗೆ ಇನ್ನೂ ಹಲವು ಬದಲಾವಣೆಗಳು ಆಗಲಿವೆ. ಹಾಗಾದರೆ, ಹೊಸ ವರ್ಷದ ಮೊದಲ ದಿನದಿಂದ ಯಾವೆಲ್ಲ ಹಣಕಾಸು ನಿಯಮಗಳು ಬದಲಾಗುತ್ತವೆ? ಸಾರ್ವಜನಿಕರ ಮೇಲೆ ಇವು ಹೇಗೆ ಪರಿಣಾಮ ಬೀರಲಿವೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
8ನೇ ವೇತನ ಆಯೋಗ ಆರಂಭ
2025ರ ಡಿಸೆಂಬರ್ 31ಕ್ಕೆ 7ನೇ ವೇತನ ಆಯೋಗ ಮುಕ್ತಾಯವಾಗಲಿದೆ. ಇಲ್ಲಿಂದ 8ನೇ ವೇತನ ಆಯೋಗ ಆರಂಭವಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ಜಾರಿಗೊಳಿಸಿದೆ. ಆದರೆ, ಆಯೋಗವು ಇನ್ನೂ ಶಿಫಾರಸುಗಳನ್ನು ಜಾರಿಗೆ ತರದ ಕಾರಣ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.
ಇಎಂಐ ಭಾರ ಹಗುರ
ಎಸ್ ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಖ್, ಎಚ್ ಡಿಎಫ್ ಸಿ ಸೇರಿ ಹಲವು ಬ್ಯಾಂಕ್ ಗಳು ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಈ ದರ ಇಳಿಕೆ ಸಾಲದ ಮೇಲಿನ ಬಡ್ಡಿದರದ ಮೇಲೆ ನೇರ ಪರಿಣಾಮ ಬೀರಲಿದೆ. ಇದರಿಂದ ಹೋಮ್ ಲೋನ್ ಮೇಲಿನ ಇಎಂಐ ಹೊರೆ ಸ್ವಲ್ಪ ಹಗರುವಾಗಲಿದೆ. ಇದರ ಜತೆಗೆ ಫಿಕ್ಸೆಡ್ ಡೆಪಾಸಿಟ್ ಮೇಲಿನ ನವೀಕರಣಗೊಂಡ ಬಡ್ಡಿದರಗಳು 2026 ಜನವರಿಯಿಂದ ಅನ್ವಯವಾಗಲಿವೆ. ಇದರಿಂದ ಎಫ್ ಡಿ ಮೇಲಿನ ಬಡ್ಡಿ ಗಳಿಕೆ ಕಡಿಮೆಯಾಗಲಿದೆ.
ವಾರಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಅಪ್ಡೇಟ್
ಈಗ ಕ್ರೆಡಿಟ್ ಸ್ಕೋರ್ ಪ್ರತಿ 15 ದಿನಗಳಿಗೊಮ್ಮೆ ಅಪ್ಡೇಟ್ ಮಾಡಲಾಗುತ್ತಿದೆ. ಹೊಸ ವರ್ಷದಿಂದ ಕ್ರೆಡಿಟ್ ಬ್ಯೂರೋಗಳು ಪ್ರತಿ ವಾರಕ್ಕೊಮ್ಮೆ ಗ್ರಾಹಕರ ಹಣಕಾಸಿನ ಅಂಕಿ-ಅಂಶಗಳು, ಕ್ರೆಡಿಟ್ ಸ್ಕೋರ್ ನವೀಕರಣ ಮಾಡಲಾಗುತ್ತದೆ. ಇದು ಹೊಸ ವರ್ಷದಲ್ಲಾಗುತ್ತಿರುವ ಪ್ರಮುಖ ಬದಲಾವಣೆಯಾಗಿದೆ.
ಇದನ್ನೂ ಓದಿ : 2026ರಿಂದ ಸಿಮ್-ಬೈಂಡಿಂಗ್ ಮತ್ತು ಸಿಎನ್‌ಎಪಿ ನಿಯಮ ಜಾರಿ ; ಏನಿದು ಸುರಕ್ಷತಾ ಫೀಚರ್



















