ಸದ್ಯಕ್ಕೆ ಬಿಗ್ ಬಾಸ್ ಮನೆ ಖಾಲಿಖಾಲಿಯಾಗಿದೆ. ಕೊರೋನ ಟೈಮ್ ಬಿಟ್ರೆ, ಈ ರೀತಿ ಬಿಗ್ ಬಾಸ್ ಕಾರ್ಯಕ್ರಮ ಅರ್ಧದಲ್ಲೇ ಸ್ಥಗಿತಗೊಂಡಿರೋದು ಇದೇ ಮೊದಲು..! ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದ ಕಾರಣ ‘ಬಿಗ್ ಬಾಸ್’ಗೆ ಕಂಟಕ ಎದುರಾಗಿದೆ. ಮನೆಯೊಳಗಿನ ನಿಯಮಗಳನ್ನ ಕಟ್ಟುನಿಟ್ಟಾಗಿ ಹೇಳೋ ಜನಪ್ರಿಯ ಶೋ ‘ಬಿಗ್ ಬಾಸ್’, ರೂಲ್ಸ್ ಫಾಲೋ ಮಾಡೋ ವಿಚಾರದಲ್ಲೇ ಎಡವಿಬಿಟ್ಟಿದೆ. ಕಾನೂನಿನ ತೊಡಕುಗಳು ಪರಿಹಾರವಾಗೋವರೆಗೂ ಬಿಗ್ ಬಾಸ್ ಒಂದು ಅತಂತ್ರ ಪರಿಸ್ಥಿತಿಯಲ್ಲಿ ಲಾಕ್ ಆಗಿಬಿಟ್ಟಿದೆ.

ಬಿಗ್ ಬಾಸ್ ಕಾರ್ಯಕ್ರಮ ನಡಿತಿರೋ ಜಾಲಿವುಡ್ ಸ್ಟುಡಿಯೋಸ್, ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ. ಪರಿಸರ ನಿಯಮ ಉಲ್ಲಂಘನೆಯಡಿ ‘ಬಿಗ್ ಬಾಸ್’ಗೆ ಬೀಗ ಜಡಿಯಲಾಗಿದೆ. ಮುಖ್ಯವಾಗಿ 2024ರಲ್ಲೇ ರಾಮನಗರದ ಅಧಿಕಾರಿಗಳು 2 ಬಾರಿ ನೋಟಿಸ್ ಕೊಟ್ಟಿದ್ರೂ, ಅದನ್ನ ಜಾಲಿವುಡ್ ಸ್ಟುಡಿಯೋಸ್ ವ್ಯವಸ್ಥಾಪಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಮ್ಯೂಸ್ ಮೆಂಟ್ ಪಾರ್ಕ್ ಗೂ ಲೈಸೆನ್ಸ್ ಪಡೆದಿರಲಿಲ್ಲ. ಇದೀಗ ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಸ್ಟುಡಿಯೋದಿಂದ ಎಲ್ಲರನ್ನೂ ಆಚೆ ಕಳಿಸಲಾಗಿದೆ. ಬಿಗ್ ಬಾಸ್ ಸ್ಪರ್ಧಿಗಳನ್ನ ಬಿಡದಿ ಈಗಲ್ ಟನ್ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ.
ಕಾನೂನಿನ ಬಲೆಯಲ್ಲಿ ‘ಬಿಗ್ ಬಾಸ್‘
ಕರ್ನಾಟಕ ನ್ಯೂಸ್ ಬೀಟ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ, ಕಲರ್ಸ್ ಕನ್ನಡ ವಾಹಿನಿ ಕೋರ್ಟ್ ಮೊರೆ ಹೋಗಲು ಸಕಲ ಸಿದ್ಧತೆಗಳನ್ನ ನಡೆಸಿದೆ. ನಿರೂಪಕ ಕಿಚ್ಚ ಸುದೀಪ್ ಜೊತೆಗೂ ಬಿಗ್ ಬಾಸ್ ಆಯೋಜಕರು ಮುಂದಿನ ನಡೆಗಳ ಬಗ್ಗೆ ಚರ್ಚಿಸಿದ್ದಾರೆ. ತಾತ್ಕಾಲಿಕವಾಗಿ 10 ದಿನಗಳ ಕಾಲ ಬಿಗ್ ಬಾಸ್ ಸ್ಥಗಿತಗೊಳ್ಳುತ್ತೆ. ತಾವರೆಕೆರೆಯ ಬಳಿ ಪರ್ಯಾಯ ಮನೆ ನಿರ್ಮಿಸೋದಕ್ಕೂ ಕಲರ್ಸ್ ಕನ್ನಡ ಯೋಚಿಸುತ್ತಿದೆಯಂತೆ. ಜೊತೆಗೆ ತುರ್ತು ಅರ್ಜಿ ವಿಚಾರಣೆಗೆ ಹಿರಿಯ ವಕೀಲರೊಬ್ಬರಿಂದ ಅರ್ಜಿ ಹಾಕಿಸಿ ವಾದ ಮಂಡಿಸೋಕು ಕಲರ್ಸ್ ಕನ್ನಡ ಪ್ಲ್ಯಾನ್ ಮಾಡುತ್ತಿದೆ.

‘ಬಿಗ್ ಬಾಸ್‘ ಭವಿಷ್ಯವೇನು..?
ಸದ್ಯಕ್ಕಂತೂ ಬಿಗ್ ಬಾಸ್ ಸ್ಪರ್ಧಿಗಳ ಪರಿಸ್ಥಿತಿ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬಂತಾಗಿದೆ. ಸ್ಪರ್ಧಿಗಳು ಯಾರ ಸಂಪರ್ಕಕ್ಕೂ ಸಿಗದಂತೆ ವ್ಯವಸ್ಥೆ ಮಾಡಲಾಗಿದೆ. ಎರಡೇವಾರಕ್ಕೆ ಬಿಗ್ ಬಾಸ್ ನಿಂತು ಹೋಗಿದ್ದು ವೀಕ್ಷಕರಿಗಂತೂ ಉತ್ಸಾಹಭಂಗವಾಗಿ ಹೋಗಿದೆ.

ಕಿಚ್ಚ ಸುದೀಪ್ ‘ಮೌನ‘ವೇಕೆ?
ಕಿಚ್ಚನ ಮೌನವೂ ನಾನಾ ಅರ್ಥಗಳನ್ನ ಕಲ್ಪಿಸುತ್ತಿದೆ. ಒಳಗೊಳಗೇ ‘ನಟ್ಟು-ಬೋಲ್ಟ್’ ಹೇಳಿಕೆ ಟ್ರೆಂಡಿಂಗ್ ನಲ್ಲಿದೆ. ಬಿಗ್ ಬಾಸ್ ಮನೆಯ ಭಾಗ್ಯದ ಬಾಗಿಲು ಈ ಸೀಸನ್ ತೆಗೆಯುತ್ತಾ ಇಲ್ವಾ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ..!