ಹೈದರಾಬಾದ್: ಸರ್ಕಾರಿ ನೌಕರಿ ಬೇಕು, ಸಾಫ್ಟ್ ವೇರ್ ಎಂಜಿನಿಯರ್ ಆಗಿರಬೇಕು, ಕಾರು, ಸ್ವಂತ ಮನೆ ಇರಬೇಕು ಎಂಬುದು ಸೇರಿ ಯುವತಿಯರು ಈಗ ಹತ್ತಾರು ಬೇಡಿಕೆಗಳನ್ನು ಇರಿಸುತ್ತಿದ್ದಾರೆ. ಇದರಿಂದಾಗಿ ಯುವಕರಿಗೆ ಮದುವೆಯಾಗಲು ವಧು ಸಿಗುತ್ತಿಲ್ಲ. ಮದುವೆಯಾಗಲು ಹುಡುಗಿ ಸಿಗದೆ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳೂ ಸುದ್ದಿಯಾಗುತ್ತಿವೆ. ಇಂತಹ ಪರಿಸ್ಥಿತಿ ಇರುವಾಗ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ಒಂದೇ ಕಲ್ಯಾಣ ಮಂಟಪದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾಗಿದ್ದಾನೆ.
ಕುಮುರಮಮ್ ಭೀಮ್ ಆಸಿಫಾಬಾದ್ ಜಿಲ್ಲೆಯ ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್ ಎಂಬ ಯುವಕನು ಇಬ್ಬರು ಯುವತಿಯರನ್ನು ವಿವಾಹವಾಗಿದ್ದಾನೆ. ಇಬ್ಬರು ಯುವತಿಯರು ಕೂಡ ಒಬ್ಬನನ್ನೇ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ, ಈತನು ಇಬ್ಬರನ್ನೂ ಒಂದೇ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾನೆ. ಆದರೆ, ಭಾರತದಲ್ಲಿ ಹಿಂದೂಗಳು ಬಹುಪತ್ನಿತ್ವ ಪದ್ಧತಿ ಅನುಸರಿಸುವುದು ಕಾನೂನುಬಾಹಿರವಾಗಿದೆ. ಹಾಗಾಗಿ, ಈತನು ಕಾನೂನು ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಷ್ಟಕ್ಕೂ ಆಗಿದ್ದೇನು?
ಲಾಲ್ ದೇವಿ ಮತ್ತು ಝಲ್ಕರಿ ದೇವಿ ಎಂಬ ಇಬ್ಬರು ಯುವತಿಯರನ್ನೂ ಆತ ಪ್ರೀತಿಸುತ್ತಿದ್ದ. ಸುಮಾರು ಮೂರು ವರ್ಷಗಳಿಂದಲೂ ಈ ತ್ರಿಕೋನ ಪ್ರೇಮಕತೆ ಜೋರಾಗಿ ಸಾಗುತ್ತಿತ್ತು. ಇಬ್ಬರಿಗೂ ಆತ “ನಾನು ನಿನ್ನೇ ಪ್ರೀತಿಸುವೆ” ಎಂದು ನಂಬಿಸಿದ್ದ. ಆದರೆ, ಒಂದು ದಿನ ಇಬ್ಬರೂ ಹೆಣ್ಣುಮಕ್ಕಳಿಗೆ ಸೋರ್ಯದೇವ್ನ ಪ್ರೇಮದಾಟ ತಿಳಿದಿದೆ. ಸ್ವಲ್ಪ ದಿನಗಳ ಕಾಲ ಮುನಿಸಿಕೊಂಡಿದ್ದ ಹೆಣ್ಣುಮಕ್ಕಳು ಬಳಿಕ ಪರಸ್ಪರರು ಚರ್ಚೆ ಮಾಡಿ ಒಟ್ಟಿಗೆ ಒಂದೇದಿನ ಒಂದೇ ಮಂಟಪದಲ್ಲಿಮದುವೆಯಾಗುವ ತೀರ್ಮಾನ ಕೈಗೊಂಡರು. ಇದಕ್ಕೆ ಗ್ರಾಮಸ್ಥರು ಕೂಡ ಒಪ್ಪಿಗೆ ಸೂಚಿಸಿದರು ಎಂದು ತಿಳಿದುಬಂದಿದೆ.
ಸೂರ್ಯದೇವ್ ಅವರು ಇಬ್ಬರೂ ಯುವತಿಯರ ಕುಟುಂಬಸ್ಥರ ಮನವೊಲಿಸಿ ಆಮಂತ್ರಣ ಪತ್ರಿಕೆಯಲ್ಲಿಇಬ್ಬರೂ ಪ್ರೇಯಸಿಯರ ಹೆಸರನ್ನು ಮುದ್ರಿಸಿದ್ದಾನೆ. ಈ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದೆ. ಮದುವೆಯ ದಿನ ತೆಗೆದ ವೀಡಿಯೋ ಕೂಡ ವೈರಲ್ ಆಗಿದೆ. ಮದುವೆಯ ವಿಡಿಯೊದಲ್ಲಿಇಬ್ಬರು ಯುವತಿಯರು ಸೂರ್ಯದೇವ್ ಕೈ ಹಿಡಿದು ಕುಳಿತಿದ್ದಾರೆ. ಬಳಿಕ ಇಬ್ಬರೊಂದಿಗೂ ಆತ ಸಪ್ತಪದಿ ತುಳಿದಿದ್ದಾನೆ. ವೀಡಿಯೋ ವೈರಲ್ ಆಗುತ್ತಲೇ ಸಿಂಗಲ್ ಆಗಿ ಉಳಿದವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.