ನವದೆಹಲಿ: ಸಂಸತ್ ಭವನದ ಆವರಣಕ್ಕೆ ನಾಯಿಯನ್ನು ಕರೆತಂದು ಸುದ್ದಿಯಾಗಿದ್ದ ಕಾಂಗ್ರೆಸ್ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧರಿ, ಇದೀಗ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾಧ್ಯಮಗಳ ಮುಂದೆಯೇ ‘ಬೌ ಬೌ’ (ನಾಯಿಯಂತೆ ಬೊಗಳುವುದು) ಎಂದು ಮಾಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿರುವ ಬಿಜೆಪಿ ನಾಯಕರಿಗೆ ಸವಾಲು ಹಾಕಿರುವ ಅವರು, “ನಾನೇನೂ ನಿಯಮ ಉಲ್ಲಂಘಿಸಿಲ್ಲ. ಹಕ್ಕುಚ್ಯುತಿ ಮಂಡಿಸುವುದಾದರೆ ಮಾಡಲಿ, ನಾನದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ,” ಎಂದು ತಿರುಗೇಟು ನೀಡಿದ್ದಾರೆ.
“ಕಚ್ಚುವವರು ಸಂಸತ್ತಿನ ಒಳಗಿದ್ದಾರೆ”:
ಮಾಧ್ಯಮದವರೊಂದಿಗೆ ಮಾತನಾಡಿದ 71 ವರ್ಷದ ಕಾಂಗ್ರೆಸ್ ನಾಯಕಿ, “ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎತ್ತಿನ ಬಂಡಿಯಲ್ಲಿ ಸಂಸತ್ತಿಗೆ ಬಂದಿದ್ದರು. ಹಿಂದೂ ಧರ್ಮದಲ್ಲಿ ನಾಯಿಗೆ ಮಹತ್ವದ ಸ್ಥಾನವಿದೆ. ಸಂಸತ್ ಆವರಣಕ್ಕೆ ನಾಯಿ ತರಬಾರದು ಎಂದು ಯಾವ ಕಾನೂನಿನಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, “ನಾನು ಅಪಘಾತದ ಸ್ಥಳದಿಂದ ನಾಯಿಮರಿಯನ್ನು ರಕ್ಷಿಸಿ ಕರೆತಂದಿದ್ದೆ. ಆದರೆ, ನಿಜವಾಗಿಯೂ ‘ಕಚ್ಚುವವರು’ ಸಂಸತ್ತಿನ ಒಳಗಡೆ ಕುಳಿತು ಸರ್ಕಾರ ನಡೆಸುತ್ತಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಾನು ಪ್ರಾಣಿಯನ್ನು ರಕ್ಷಿಸಿದರೆ ಅದು ದೊಡ್ಡ ಚರ್ಚೆಯ ವಿಷಯವಾಗುತ್ತದೆ,” ಎಂದು ಆಡಳಿತ ಪಕ್ಷದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಬಿಜೆಪಿ ಕಿಡಿ
ರೇಣುಕಾ ಚೌಧರಿ ಅವರ ‘ಬೌ ಬೌ’ ವಿಡಿಯೋ ಮತ್ತು ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯಿಸಿ, “ಚುನಾವಣೆಗಳಲ್ಲಿ ಸೋತಾಗ ಮಾನಸಿಕ ಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ರೇಣುಕಾ ಚೌಧರಿ ಅವರು ಸಂಸತ್ ಸದಸ್ಯರನ್ನು ನಾಯಿಗಳಿಗೆ ಹೋಲಿಸುವ ಮೂಲಕ ಇಡೀ ಸಂಸತ್ತಿಗೆ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಗುಣಮುಖರಾಗಲಿ (Get well soon),” ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ಗೆ ಸಂಸತ್ತಿನಲ್ಲಿ ಚರ್ಚೆಗಿಂತ ನಾಟಕವೇ ಮುಖ್ಯವಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಅವರು ಜರಿದಿದ್ದಾರೆ.
ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ
ಈ ಎಲ್ಲಾ ಹೈಡ್ರಾಮಾ ನಡುವೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೇಣುಕಾ ಚೌಧರಿ ಬೆಂಬಲಕ್ಕೆ ನಿಂತಿದ್ದಾರೆ. “ದೇಶದಲ್ಲಿ ಈಗ ಚರ್ಚಿಸಲು ‘ನಾಯಿ’ಯೇ ಪ್ರಮುಖ ವಿಷಯವಾಗಿದೆ. ಪಾಪ, ಆ ನಾಯಿ ಏನು ಮಾಡಿದೆ? ಸಂಸತ್ತಿಗೆ ನಾಯಿಗಳನ್ನು ತರುವಂತಿಲ್ಲವೇ?” ಎಂದು ಮಾಧ್ಯಮಗಳನ್ನು ಪ್ರಶ್ನಿಸುವ ಮೂಲಕ ವಿಷಯವನ್ನು ಲಘುವಾಗಿ ಪರಿಗಣಿಸಿದ್ದಾರೆ.
ಏನಿದು ಘಟನೆ?
ಸಂಸತ್ತಿಗೆ ಆಗಮಿಸುವಾಗ ರೇಣುಕಾ ಚೌಧರಿ ಅವರು ತಮ್ಮೊಂದಿಗೆ ನಾಯಿಯೊಂದನ್ನು ಕರೆತಂದಿದ್ದರು. ಭದ್ರತಾ ಸಿಬ್ಬಂದಿ ದ್ವಾರದಲ್ಲೇ ಅವರನ್ನು ತಡೆದರಾದರೂ, ನಾಯಕಿ ಹಠ ಹಿಡಿದು ಒಳಪ್ರವೇಶಿಸಿದ್ದರು. ನಂತರ ನಾಯಿಯನ್ನು ಕಾರಿನಲ್ಲಿ ವಾಪಸ್ ಕಳುಹಿಸಲಾಯಿತಾದರೂ, ಸಂಸತ್ತಿನ ಶಿಷ್ಟಾಚಾರದ ಕುರಿತು ಇದು ದೊಡ್ಡ ಚರ್ಚೆಗೆ ಗ್ರಾಸವಾಯಿತು.
ಇದನ್ನೂ ಓದಿ : ದೆಹಲಿ ಪಾಲಿಕೆ ಉಪಚುನಾವಣೆ : ಬಿಜೆಪಿಗೆ 7, ಎಎಪಿಗೆ 3 ಸ್ಥಾನ ; ಖಾತೆ ತೆರೆದ ಕಾಂಗ್ರೆಸ್



















