ನವದೆಹಲಿ: “ಆಪರೇಷನ್ ಸಿಂದೂರ” ಕುರಿತು ಸಂಸತ್ತಿನಲ್ಲಿ ಸೋಮವಾರ ನಡೆದ ಮಹತ್ವದ ಚರ್ಚೆಯ ವೇಳೆ, ಭಾಗವಹಿಸುವ ಸಂಸದರ ಪಟ್ಟಿಯಿಂದ ಕಾಂಗ್ರೆಸ್ ಪಕ್ಷವು ತನ್ನ ಪ್ರಮುಖ ಸಂಸದರಾದ ಮನೀಶ್ ತಿವಾರಿ ಮತ್ತು ಶಶಿ ತರೂರ್ ಅವರನ್ನು ಹೊರಗಿಟ್ಟಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ತಿವಾರಿ ಅವರು ತಮ್ಮ ಪಕ್ಷದ ವಿರುದ್ಧ ಸೂಕ್ಷ್ಮವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ನೊಳಗಿನ ಆಂತರಿಕ ಭಿನ್ನಾಭಿಪ್ರಾಯದ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ತಮ್ಮನ್ನು ಮತ್ತು ಶಶಿ ತರೂರ್ ಅವರನ್ನು ಚರ್ಚೆಯಿಂದ ಹೊರಗಿಟ್ಟಿರುವ ಬಗ್ಗೆ ಪ್ರಕಟವಾದ ವರದಿಯೊಂದರ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಮನೀಶ್ ತಿವಾರಿ, 1970ರ ‘ಪೂರಬ್ ಔರ್ ಪಶ್ಚಿಮ್’ ಚಲನಚಿತ್ರದ ಪ್ರಸಿದ್ಧ ದೇಶಭಕ್ತಿ ಗೀತೆಯ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ.
“ಹೈ ಪ್ರೀತ್ ಜಹಾಂ ಕಿ ರೀತ್ ಸದಾ, ಮೈ ಗೀತ್ ವಹಾಂ ಕೆ ಗಾತಾ ಹೂಂ, ಭಾರತ್ ಕಾ ರೆಹನೆ ವಾಲಾ ಹೂಂ, ಭಾರತ್ ಕಿ ಬಾತ್ ಸುನಾತಾ ಹೂಂ. ಜೈ ಹಿಂದ್” (ಎಲ್ಲಿ ಪ್ರೀತಿಯೇ ಪದ್ಧತಿಯಾಗಿದೆವೋ, ನಾನು ಅಲ್ಲಿನ ಗೀತೆಯನ್ನೇ ಹಾಡುತ್ತೇನೆ, ನಾನು ಭಾರತದ ನಿವಾಸಿ, ನಾನು ಭಾರತದ ಕಥೆಯನ್ನೇ ಹೇಳುತ್ತೇನೆ, ಜೈ ಹಿಂದ್) ಎಂದು ಅವರು ಬರೆದುಕೊಂಡಿದ್ದಾರೆ.
ಈ ಚರ್ಚೆಯಲ್ಲಿ ಭಾಗವಹಿಸಲು ತಮಗೆ ಇಚ್ಛೆಯಿದೆ ಎಂದು ತಿವಾರಿ ಅವರು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಚೇರಿಗೆ ಇಮೇಲ್ ಮೂಲಕ ತಿಳಿಸಿದ್ದರು. ಆದಾಗ್ಯೂ, ಕಾಂಗ್ರೆಸ್ ಅವರನ್ನು ಚರ್ಚೆಯಲ್ಲಿ ಪಾಲ್ಗೊಳ್ಳುವವರ ಪಟ್ಟಿಯಲ್ಲಿ ಸೇರಿಸಿರಲಿಲ್ಲ ಎಂದು ಹೇಳಲಾಗಿದೆ.
ಶಶಿ ತರೂರ್ ಕೂಡ ಚರ್ಚೆಯಿಂದ ಹೊರಕ್ಕೆ
ಮತ್ತೊಂದೆಡೆ, ಸಂಸದ ಶಶಿ ತರೂರ್ ಅವರನ್ನು ಚರ್ಚೆಯಲ್ಲಿ ಭಾಗವಹಿಸುವಂತೆ ಸ್ವತಃ ಕಾಂಗ್ರೆಸ್ ಪಕ್ಷವೇ ಸಂಪರ್ಕಿಸಿ, ಮನವಿ ಮಾಡಿತ್ತು. ಆದರೆ, ಈ ವಿಚಾರದಲ್ಲಿ ಪಕ್ಷದ ಹಿತಾಸಕ್ತಿಗಾಗಿ ನನ್ನ ನಿಲುವಿಗೆ ವಿರುದ್ಧವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿ ಅವರು ಆಹ್ವಾನವನ್ನು ನಿರಾಕರಿಸಿದರು ಎಂದು ಮೂಲಗಳು ತಿಳಿಸಿವೆ. ವಿದೇಶ ಪ್ರವಾಸದ ವೇಳೆ ಆಪರೇಷನ್ ಸಿಂಧೂರ ಒಂದು ಯಶಸ್ವಿ ಕಾರ್ಯಾಚರಣೆ ಎಂದು ತಾವು ನಿರಂತರವಾಗಿ ಪ್ರತಿಪಾದಿಸಿದ್ದು, ಈಗ ಅದರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ತರೂರ್ ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡುವಿರಾ ಎಂದು ವರದಿಗಾರರು ಕೇಳಿದಾಗ, ತಾವು “ಮೌನ ವ್ರತ”ದಲ್ಲಿರುವುದಾಗಿ ಹೇಳುವ ಮೂಲಕ ಅವರು ತಮ್ಮ ಪಕ್ಷವನ್ನೇ ಕುಟುಕಿದ್ದಾರೆ.
ವಿಶೇಷವೆಂದರೆ, “ಆಪರೇಷನ್ ಸಿಂದೂರ” ಕಾರ್ಯಾಚರಣೆಯ ನಂತರ ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲದ ವಿರುದ್ಧ ಭಾರತದ ನಿಲುವನ್ನು ಸ್ಪಷ್ಟಪಡಿಸಲು ವಿವಿಧ ದೇಶಗಳಿಗೆ ತೆರಳಿದ ಸರ್ಕಾರದ ಸರ್ವಪಕ್ಷ ನಿಯೋಗಗಳಲ್ಲಿ ತಿವಾರಿ ಮತ್ತು ತರೂರ್ ಇಬ್ಬರೂ ಭಾಗವಹಿಸಿದ್ದರು. ಇಂತಹ ಅನುಭವಿ ನಾಯಕರನ್ನು ಚರ್ಚೆಯಿಂದ ಹೊರಗಿಟ್ಟಿರುವುದು ಕಾಂಗ್ರೆಸ್ ನಲ್ಲಿನ ಆಂತರಿಕ ಬಿರುಕನ್ನು ಬಹಿರಂಗಪಡಿಸಿದೆ. ನಿಯೋಗದ ಭಾಗವಾಗಿದ್ದ ಮತ್ತೋರ್ವ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಅವರಿಗೂ ಚರ್ಚೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.