ಬೆಂಗಳೂರು: ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ’ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಗಳು ಇಂದು ಭಾರತ್ ಬಂದ್ ಕರೆ ನೀಡಿದ್ದವು. ಆದರೆ ಕರ್ನಾಟಕದಲ್ಲಾಗಲಿ, ರಾಜಧಾನಿ ಬೆಂಗಳೂರಿನಲ್ಲಾಗಲಿ ಬಂದ್ ಬಿಸಿ ಮುಟ್ಟಿಲ್ಲ. ಸಾಮಾನ್ಯ ಜನಜೀವನಕ್ಕೆ ಯಾವುದೇ ಸಮಸ್ಯೆಗಳು ಎದುರಾಗಿಲ್ಲ.
ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ) ಬಸ್‌ಗಳು ಎಂದಿನಂತೆ ಸಂಚರಿಸಿವೆ. ಪ್ರಯಾಣಿಕರಿಗೆ ಆಟೋಗಳು ಮತ್ತು ಕ್ಯಾಬ್ ಸೌಲಭ್ಯಗಳು ಸಹ ಲಭ್ಯವಿತ್ತು. ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸದ ಕಾರಣ ಶಾಲೆಗಳು ಮತ್ತು ಕಾಲೇಜುಗಳು ಎಂದಿನಂತೆ ನಡೆದವು. ಆದರೆ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಯನ್ನು ಹಿಂಪಡೆಯಬೇಕು. ಕಾರ್ಮಿಕ ವಿರೋಧಿ ನೀತಿಗಳು ಮತ್ತು ನೌಕರರ ಕೆಲಸದ ಸಮಯವನ್ನು ಹೆಚ್ಚಿಸುವ ಪ್ರಸ್ತಾಪವನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಹುಬ್ಬಳ್ಳಿಯಲ್ಲಿ, ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ಅಡಿಯಲ್ಲಿ ವಿವಿಧ ಕಾರ್ಮಿಕ ಸಂಘಗಳ ಸದಸ್ಯರು ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ ಧರಣಿ ನಡೆಸಿದರು.



















