ನವದೆಹಲಿ : ತಾನು ಪ್ರಾಣಕ್ಕಿಂತ ಪ್ರೀತಿಸುತ್ತಿದ್ದ ವ್ಯಕ್ತಿ ಈಗಾಗಲೇ ವಿವಾಹಿತ ಎಂಬ ಕಹಿ ಸತ್ಯ ತಿಳಿದ ಯುವತಿಯೊಬ್ಬಳು ಆಕ್ರೋಶಗೊಂಡು, ಆತನಿಗೆ ಅಮಲು ಪದಾರ್ಥವನ್ನು ಕುಡಿಸಿ, ಅವನ ಗುಪ್ತಾಂಗವನ್ನೇ ಕತ್ತರಿಸಿದ ಭೀಕರ ಘಟನೆ ರಾಷ್ಟ್ರ ರಾಜಧಾನಿಯ ವಜೀರಾಬಾದ್ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನಿವಾಸಿಯಾದ 22 ವರ್ಷದ ವಿಸರ್ಜೀತ್ ಎಂಬಾತ ಈ ಕೃತ್ಯಕ್ಕೆ ಬಲಿಯಾದ ದುರ್ದೈವಿ.
ವಿಸರ್ಜೀತ್ ಮತ್ತು ಬಿಹಾರ ಮೂಲದ ಅಮಿನಾ ಖಾತೂನ್ ಕಳೆದ ಎರಡು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಆದರೆ, ತಾನು ವಿವಾಹಿತ ಎಂಬುದನ್ನು ವಿಸರ್ಜೀತ್ ಮುಚ್ಚಿಟ್ಟಿದ್ದ. ಫೆಬ್ರವರಿ 24ರಂದು ವಿಸರ್ಜೀತ್ ದೆಹಲಿಗೆ ಆಗಮಿಸಿ ಅಮಿನಾಳ ಜೊತೆ ಉಳಿದುಕೊಂಡಿದ್ದ. ಈ ನಡುವೆ ವಿಸರ್ಜೀತ್ ಈಗಾಗಲೇ ವಿವಾಹಿತ ಎಂಬ ಸತ್ಯ ಅಮಿನಾಳಿಗೆ ಗೊತ್ತಾಗಿದೆ. ತನ್ನನ್ನು ಪ್ರೀತಿಸುವ ನಾಟಕವಾಡಿ ವಿಸರ್ಜೀತ್ ದ್ರೋಹ ಎಸಗಿದ್ದಾನೆ ಎಂಬುದು ತಿಳಿಯುತ್ತಿದ್ದಂತೆ ಯುವತಿಯು, ಆತನಿಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಡುರಾತ್ರಿಯಲ್ಲಿ ನಡೆದ ಭೀಕರ ಕೃತ್ಯ
ಫೆಬ್ರವರಿ 24ರ ತಡರಾತ್ರಿ ಅಮಿನಾ ತನ್ನ ಪ್ರಿಯತಮನಿಗೆ ಕುಡಿಯಲು ಹಾಲನ್ನು ನೀಡಿದ್ದು, ಅದರಲ್ಲಿ ಅಮಲು ಪದಾರ್ಥವನ್ನು ಬೆರೆಸಿದ್ದಳು. ಅದನ್ನು ಕುಡಿದ ವಿಸರ್ಜೀತ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ತಡರಾತ್ರಿ 2.30ರ ಹೊತ್ತಿಗೆ ಆಕೆ ಚೂಪಾದ ಆಯುಧದಿಂದ ಆತನ ಗುಪ್ತಾಂಗವನ್ನು ಕತ್ತರಿಸಲು ಯತ್ನಿಸಿ, ತೀವ್ರ ಹಲ್ಲೆ ನಡೆಸಿದ್ದಾಳೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ವಿಸರ್ಜೀತ್ ಹೇಗೋ ಹತ್ತಿರದ ಹಿಂದೂ ರಾವ್ ಆಸ್ಪತ್ರೆಗೆ ತಲುಪಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ
ಆಸ್ಪತ್ರೆಯಿಂದ ಮಾಹಿತಿ ಪಡೆದ ಪೊಲೀಸರು ವಿಸರ್ಜೀತ್ ನೀಡಿದ ಹೇಳಿಕೆಯ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 118(2) ಮತ್ತು 123ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ನಂತರ ಆರೋಪಿ ಅಮಿನಾ ಖಾತೂನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸತ್ತವರ ಹೆಸರಿನಲ್ಲಿ ಗೃಹಲಕ್ಷ್ಮೀ ಹಣ ಪಡೆದವರಿಗೆ ಕಾದಿದೆ ಶಾಸ್ತಿ!



















