ನವದೆಹಲಿ: ಬಾಲಿವುಡ್‌ನ ತಾರಾ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇಂದು ಅವರ ಬದುಕಿನ ಈ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ತಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಆರಂಭಿಸುತ್ತಿರುವುದಾಗಿ ತಿಳಿಸಿದ್ದಾರೆ.

“ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ” ಎಂದು ಈ ಜೋಡಿ ಬರೆದುಕೊಂಡಿದೆ. ಇದರ ಜೊತೆಗೆ, ವಿಕ್ಕಿ ಅವರು ಕತ್ರಿನಾ ಅವರ ಬೇಬಿ ಬಂಪ್ ಅನ್ನು ಪ್ರೀತಿಯಿಂದ ಸ್ಪರ್ಶಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿ ಬಹಿರಂಗವಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಜಾನ್ವಿ ಕಪೂರ್, ಜೋಯಾ ಅಖ್ತರ್, ಭೂಮಿ ಪಡ್ನೇಕರ್, ಆಯುಷ್ಮಾನ್ ಖುರಾನಾ ಸೇರಿದಂತೆ ಹಲವು ತಾರೆಯರು ಕಾಮೆಂಟ್ ಮಾಡುವ ಮೂಲಕ ದಂಪತಿಗೆ ಶುಭ ಹಾರೈಸಿದ್ದಾರೆ.
2021ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ವಿವಾಹವಾಗಿದ್ದ ಈ ಜೋಡಿ, ಬಾಲಿವುಡ್‌ನ ಅಚ್ಚುಮೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕತ್ರಿನಾ ಗರ್ಭಿಣಿ ಎಂಬ ವದಂತಿಗಳು ಹರಿದಾಡುತ್ತಿದ್ದವು, ಇದೀಗ ದಂಪತಿ ಅಧಿಕೃತವಾಗಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.