ಬೆಂಗಳೂರು : ಬೆಂಗಳೂರು ನವ ಭಾರತದ ರೂಪಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಇರಿಸಿರುವ ನಗರ ಇದು. ಈ ಯಶಸ್ಸಿಗೆ ಬೆಂಗಳೂರಿನ ಜನರ ಕೊಡುಗೆ ಅಪಾರವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಅವರು ಬೆಂಗಳೂರು-ಬೆಳಗಾವಿ ವಂದೇ ಮಾತರಂ ರೈಲಿಗೆ ಹಸಿರು ನಿಶಾನೆ ತೋರಿ, ಬಳಿಕ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಿದ ಬಳಿಕ ಐಐಐಟಿ ಸಭಾಂಗಣದಲ್ಲಿ ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಶಂಕು ಸ್ಥಾಪಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರು ನವ ಭಾರತದ ಸಂಕೇತವಾಗಿ ಅಭಿವೃದ್ಧಿ ಹೊಂದುತ್ತಿದೆ. ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಇರಿಸಿರುವ ನಗರ. ಈ ಯಶಸ್ಸಿಗೆ ಬೆಂಗಳೂರಿನ ಜನರ ಕೊಡುಗೆ ಅಪಾರವಾಗಿದೆ. ಇಂದು ಮೂರು ವಂದೇ ಭಾರತ್ ರೈಲುಗಳೊಂದಿಗೆ ಬೆಂಗಳೂರು ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಾಗಿದೆ. ಜೊತೆಗೆ ಬೆಂಗಳೂರು-ಬೆಳಗಾವಿ ರೈಲು ಬೆಳಗಾವಿಯಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ನಂತರ ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸು ಇಡೀ ಜಗತ್ತಿಗೆ ನವ ಭಾರತವನ್ನು ತೋರಿಸಿತು. ಈ ವಿಜಯದ ಹಿಂದಿನ ಪ್ರಮುಖ ಶಕ್ತಿ ನಮ್ಮ ಸ್ಥಳೀಯ ತಂತ್ರಜ್ಞಾನ ಮತ್ತು ಮೇಕ್ ಇನ್ ಇಂಡಿಯಾದ ಶಕ್ತಿ. ಇದಕ್ಕೆ ಕರ್ನಾಟಕ ಸಾಕಷ್ಟು ಕೊಡುಗೆ ನೀಡಿದೆ ಎಂದು ಕರ್ನಾಟಕ ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ರೈಲಿಗೆ ಚಾಲನೆ ನೀಡಿದ್ದಕ್ಕೆ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
2005ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬೆಂಗಳೂರು ಮೆಟ್ರೋ ಆರಂಭವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಪಾಲು ಅನುದಾನ ನೀಡಬೇಕು ಎನ್ನುವುದು ಇದರ ಒಪ್ಪಂದ. ಹಳದಿ ಮಾರ್ಗ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆ. ರಾಜ್ಯ ಸರ್ಜಾರ ಮೆಟ್ರೋ ಯೋಜನೆಗೆ 25,387 ಕೋಟಿ ವ್ಯಯಿಸಿದೆ. 7468.86 ಕೋಟಿ ಅಷ್ಟೇ ಕೇಂದ್ರ ವ್ಯಯಿಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಕೊಟ್ಟ ಸಾಲದಲ್ಲಿ 3987ಕೋಟಿ ರೂ.ಗಳನ್ನು ಮರು ಪಾವತಿ ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾನವಾಗಿ ಅನುದಾನ ನೀಡಿದರೆ ಇದರ ಪ್ರಗತಿ ಇನ್ನೂ ಚುರುಕು ಕಾಣುತ್ತದೆ. ಮೆಟ್ರೋ 4 ನೇ ಹಂತ 53 ಕಿ.ಮೀ ಉದ್ದವಿದೆ. ಮೂರನೇ ಹಂತದ ಮೆಟ್ರೋಗೆ ಕೇಂದ್ರ ಶೀಘ್ರದಲ್ಲೇ ಅನುಮೋದನೆ ಕೊಟ್ಟರೇ ಅತಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದಿದ್ದಲ್ಲದೇ, ಕರ್ನಾಟಕಕ್ಕೂ ಕೇಂದ್ರ ಹೆಚ್ಚು ಒತ್ತು ನೀಡಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್ ಚಾಂದ್ ಗೆಲ್ಹೋಟ್, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಮನೋಹರ್ ಲಾಲ್, ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ಡಾ. ಸಿ.ಎನ್ ಮಂಜುನಾಥ್, ಸಂಸದ ತೇಜಸ್ವಿ ಸೂರ್ಯ, ಸಚಿವ ಭೈರತಿ ಸುರೇಶ್, ಸಂಸದೆ ಶೋಭಾ ಕರಂದ್ಲಾಜೆ ಸೇರಿ ಬಿ.ಎಂ.ಆರ್.ಸಿ.ಎಲ್ ನ ಅಧಿಕಾರಿಗಳು ಸೇರಿ ಪ್ರಮುಖರು ಉಪಸ್ಥಿತರಿದ್ದರು.