ಬೆಂಗಳೂರು : ಎಂಬಿಎ ವಿದ್ಯಾರ್ಥಿಗೆ ದುಷ್ಕರ್ಮಿಗಳ ಗುಂಪೊಂದು ಚೂರಿ ಇರಿದು ದರೋಡೆ ನಡೆಸಿರುವ ಘಟನೆ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಸಂತ್ರಸ್ತ ಯುವಕನನ್ನು ನವೀನ್ ಜೆ ಜಿ (21) ಎಂದು ಗುರ್ತಿಸಲಾಗಿದೆ.
ಘಟನೆ ಬುಧವಾರ ರಾತ್ರಿ 11.30 ರಿಂದ ರಾತ್ರಿ 11.55ರ ಸುಮಾರಿಗೆ ನಡೆದಿದ್ದು, ಮರುದಿನ ದೂರು ದಾಖಲಾಗಿದೆ. ಪೇಯಿಂಗ್ ಗೆಸ್ಟ್ (ಪಿಜಿ) ನಿಂದ ಮೆಟ್ರೋ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯನ್ನು ಸ್ಕೂಟರ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ತಡೆದು, ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ.
ಯುವಕನ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಎಡ ಕೆನ್ನೆಗೆ 22 ಹೊಲಿಗೆಗಳನ್ನು ಹಾಕಲಾಗಿದೆ. ದುಷ್ಕರ್ಮಿಗಳ ದಾಳಿಗೊಳಗಾದ ಯುವಕ ರಕ್ತದ ಮಡುವಿನಲ್ಲಿಯೂ ಪಿಜಿಗೆ ಓಡಿ ಹೋಗಿದ್ದು, ಸ್ನೇಹಿತರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದುಷ್ಕರ್ಮಿಗಳು ಯುವಕನ ಬಳಿಯಿದ್ದ 2 ಲಕ್ಷ ರೂ. ಮೌಲ್ಯದ ಐಫೋನ್ ಕಸಿದು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸದ್ಯ ಯುವಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆಂದು ತಿಳಿದುಬಂದಿದೆ.
ಇದನ್ನೂ ಓದಿ : ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ | ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಯುವತಿ



















