ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಬೆಂಗಳೂರು ತತ್ತರಿಸಿ ಹೋಗಿದೆ. ಹಲವೆಡೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಲ್ಲಿ ನೀರು ತುಂಬಿ ಜನ ಪರಿತಪಿಸಿದ್ದಾರೆ.

ಸಾಯಿ ಲೇಔಟ್ ನಲ್ಲಿನ ಮನೆಗಳಲ್ಲಿ ನಾಲ್ಕಾರು ದಿನಗಳಿಂದಲೂ ನೀರು ತುಂಬಿದೆ. ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಮಳೆಗೆ ಸಿದ್ಧವಾಗಿದ್ದೇವೆ. ಯಾವುದೇ ತೊಂದರೆ ಆಗುವುದಿಲ್ಲ ಎಂದು ಕಾಮನ್ ಡೈಲಾಗ್ ಹೇಳ್ತಾರೆ…ಸಮಸ್ಯೆ ಮಾತ್ರ ಹಾಗೆ ಉಳಿದಿರುತ್ತವೆ. ಇನ್ನೂ ಮುಂಗಾರು ಮಳೆ ಆರಂಭವಾಗಿಲ್ಲ. ಮುಂಗಾರು ಪೂರ್ವ ಒಂದೇ ಮಳೆಗೆ ಇಡೀ ಬೆಂಗಳೂರು ತತ್ತರಿಸಿದೆ ಅಂದರೆ, ಮುಂಗಾರಿಗೆ ಪರಿಸ್ಥಿತಿ ಹೇಗೆ ಎಂಬ ಆತಂಕ ಜನರನ್ನು ಕಾಡುತ್ತಿದೆ.
ಒಂದೇ ಮಳೆಯಿಂದಾಗಿ ಗ್ರೇಟರ್ ಬೆಂಗಳೂರು ವಾಟರ್ ಬೆಂಗಳೂರು ಆಗಿದ್ದು, ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಿದರು.

ಯಲಹಂಕದಲ್ಲಿ ರಾಜ ಕಾಲುವೆ ಒತ್ತುವರಿ ಸ್ಥಳ ಪರಿಶೀಲಿಸಿದ ಮುಖ್ಯಮಂತ್ರಿಗಳು ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು. ಮಾನ್ಯತಾ ಟೆಕ್, ಇಬ್ಸು, ಮ್ಯಾನ್ ಫೋ ಹಾಗೂ ಕಾರ್ಲೆ ಖಾಸಗಿ ಬಿಲ್ಡರ್ ಗಳು ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ಅಧಿಕಾರಿಗಳು ವಿವರಿಸಿದರು. ಈ ವೇಳೆ ನೋಟಿಸ್ ಕೊಟ್ಟಿಲ್ಲವೇ, ಒತ್ತುವರಿ ಆಗಿರುವುದನ್ನು ನೋಡಿಕೊಂಡು ಕುಳಿತಿದ್ದೀರಾ? ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು. ಬಳಿಕ ಎಷ್ಟೇ ದೊಡ್ಡ ಬಿಲ್ಡರ್ ಆಗಿದ್ದರೂ ಮುಲಾಜು ನೋಡಬೇಡಿ, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು.

HBR ಲೇಔಟ್, ತುಂಬಿ ಹರಿಯುತ್ತಿರುವ ರಾಜಕಾಲುವೆ ಪ್ರದೇಶ ವೀಕ್ಷಣೆ
ರಾಜಕಾಲುವೆಯ ಹರಿವಿನ ಹಾದಿಯಲ್ಲಿ ರೈಲ್ವೇ ಟ್ರಾಕ್ ಇರುವ ಕಡೆ ಆಗಿರುವ ಬಾಟಲ್ ನೆಕ್ ಸರಿ ಪಡಿಸಲು, ವಿಸ್ತರಿಸಲು ಸೂಚನೆ ನೀಡಿದರು. ಬಾಧಿತ ಪ್ರದೇಶಗಳಲ್ಲಿ Basement ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ town planning ನಲ್ಲಿ ಬದಲಾವಣೆ ತರುವ ದಿಕ್ಕಿನಲ್ಲಿ ಸೂಚನೆ ನೀಡಿದರು.

ವಡ್ಡರಪಾಳ್ಯ ಲೇಔಟ್, ಗೆದ್ದಲಹಳ್ಳಿ…
ಈ ಭಾಗದ ರಾಜಕಾಲುವೆ ವಿಸ್ತೀರ್ಣ 29 ಮೀಟರ್ ಇದೆ. ಆದರೆ ಗೆದ್ದಲಹಳ್ಳಿಯ ಕಾಲುವೆ ಬಾಟಲ್ ನೆಕ್ ಇದ್ದು ಕೇವಲ 8 ಮೀಟರ್ ಇದೆ. ಆದ್ದರಿಂದ ಮೇಲಿನಿಂದ ರಾಜಕಾಲುವೆಯಲ್ಲಿ ಹರಿದು ಬರುವ ನೀರು ಈ ಬಾಟಲ್ ನೆಕ್ ನಲ್ಲಿ over flow ಆಗಿ ಸಾಯಿ ಲೇಔಟ್ ಗೆ ನುಗ್ಗುತ್ತದೆ ಎನ್ನುವುದು ಜನರ ಆರೋಪವಾಗಿದೆ. ಆದ್ದರಿಂದ 8 ಮೀಟರ್ ಬಾಟಲ್ ನೆಕ್ ಇರುವ ರೈಲ್ವೇ ವೆಂಟ್ ಅನ್ನು ವಿಸ್ತರಿಸಲು ಸೂಚನೆ ನೀಡಲಾಯಿತು. ಮಳೆ ಮತ್ತು ಪ್ರವಾಹ ಪೀಡಿತ ಸ್ಥಳ ವೀಕ್ಷಿಸಿದ ಮುಖ್ಯಮಂತ್ರಿಗಳು, “ಸಾಯಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ” ಪದಾಧಿಕಾರಿಗಳು ಮತ್ತು ಸದಸ್ಯರಿಂಸ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು. ಬಳಿಕ ಮನವಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗಂಭೀರ ಗಮನ ಹರಿಸಿ ತಕ್ಷಣಕ್ಕೆ ಸಾಧ್ಯವಿರುವ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಪಣತ್ತೂರ್ ರೈಲ್ವೇ ಬ್ರಿಡ್ಜ್
ಮಹದೇವಪುರ ವಿಧಾನಸಭಾ ಕ್ಷೇತ್ರದ ಪಣತ್ತೂರ್ ರೈಲ್ವೇ ಬ್ರಿಡ್ಜ್ ನಲ್ಲಿ ಸಾರ್ವಜನಿಕರ ಮತ್ತು ಸ್ಥಳೀಯ ನಿವಾಸಿಗಳ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು. ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಮಗ್ರ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, 350 ಮೀಟರ್ ಉದ್ದದ ಒಳಚರಂಡಿಯನ್ನು ನಿರ್ಮಿಸಿ ರಾಜಕಾಲುವೆಗೆ ಸಂಪರ್ಕ ಕೊಡಬೇಕು, ರೈಲ್ವೇ ಇಲಾಖೆ 3 ತಿಂಗಳ ಒಳಗೆ ಕಾಮಗಾರಿ ಮುಗಿಸುವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.