ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರುನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜಿಬಿಎ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹುಡುಕಿ ಹುಡುಕಿ ದಂಡ ವಿಧಿಸಲಾಗುತ್ತಿದೆ. ಈ ನಡುವೆ ಜನವಸತಿ ಪ್ರದೇಶದಲ್ಲಿ ಕಸ ಎಸೆದು ಹೋಗುತ್ತಿದ್ದ ಯುವತಿಗೆ ಸ್ಥಳೀಯರೇ ಕ್ಲಾಸ್ ತೆಗೆದುಕೊಂಡ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಜಯನಗರದ 8ನೇ ಅಡ್ಡ ರಸ್ತೆಯ ಮಾರುತಿ ಲೇಔಟ್ನಲ್ಲಿ ಓರ್ವ ಯುವತಿ ತನ್ನ ಸ್ಕೂಟರ್ನಲ್ಲಿ ರಾಶಿ ರಾಶಿ ಕಸ ತೆಗೆದುಕೊಂಡು ಬಂದು ಪಕ್ಕದ ಏರಿಯಾದ ಜನವಸತಿ ಪ್ರದೇಶದ ಬಳಿ ಸುರಿದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಇಲ್ಲಿ ಕಸ ಹಾಕಬೇಡಿ ಎಂದು ಮನವರಿಕೆ ಮಾಡಿದ್ದಾರೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಈ ರೀತಿ ಕಸ ಹಾಕಿ ಹೋದ್ರೆ ಇಲ್ಲಿನ ನಿವಾಸಿಗಳಿಗೆ ಬಹಳ ಸಮಸ್ಯೆ ಆಗುತ್ತೆ ಎಂದು ಹೇಳಿದರೂ ಯುವತಿ ಮಾತ್ರ ಯಾವುದನ್ನೂ ಲೆಕ್ಕಿಸಿಲ್ಲ. ಬದಲಾಗಿ ತನಗೆ ಬುದ್ಧಿ ಹೇಳಿದವರ ಜೊತೆಗೇ ವಾಗ್ವಾದಕ್ಕೆ ಇಳಿದಿದ್ದಾಳೆ.
ಸ್ಥಳೀಯರ ಮಾತಿಗೆ ಕೋಪಗೊಂಡ ಯುವತಿ ನಾನು ಇಲ್ಲೇ ಕಸವನ್ನು ಹಾಕೋದು, ಯಾರು ಏನು ಬೇಕಾದರೂ ಮಾಡಿಕೊಳ್ಲಿ ಎಂದು ಆವಾಜ್ ಹಾಕಿದ್ದಾಳೆ. ಈ ವೇಳೆ ನೀವು ಓದಿದ್ದೀರಲ್ವಾ? ನಿಮಗೆ ಇಷ್ಟೂ ಬುದ್ಧಿ ಇಲ್ವಾ ಎಂದು ಸ್ಥಳಿಯರು ಆಕೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತೀವಿ ಅಂತಲೂ ಹೇಳಿದ್ದಾರೆ. ಹೀಗಿದ್ದರೂ ತಲೆ ಕೆಡಿಸಿಕೊಳ್ಳದ ಆಕೆ ಕಸವನ್ನ ರಸ್ತೆ ಮಧ್ಯದಲ್ಲೇ ಚೆಲ್ಲಿ ತೆರಳಿದ್ದಾಳೆ. ಬಳಿಕ ಸ್ಥಳೀಯ ನಿವಾಸಿಗಳು ಮೊದಲೇ ಹೇಳಿದಂತೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಯುವತಿಯ ಕೆಲಸಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಹೈಡ್ರಾಮಾ | ಸಚಿವ ಸೋಮಣ್ಣರತ್ತ ಕುರ್ಚಿ ಎಸೆದ ‘ಕೈ’ ಕಾರ್ಯಕರ್ತರು!



















