ನವದೆಹಲಿ: ಸಿಲಿಕಾನ್ ಸಿಟಿ ಎಲ್ಲ ರಂಗದಲ್ಲೂ ಬೆಳೆದಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಜಾಗತಿಕ ಹಬ್ ಆಗಿದೆ. ಹೀಗಾಗಿ ಸುಲಭ ಸಂಪರ್ಕಕ್ಕೆ ಮತ್ತೊಂದು ವಿಮಾನ ನಿಲ್ದಾಣ (Airport)ದ ಅಗತ್ಯವಿದೆ ಎಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಈಗಾಗಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ನಾಗರಿಕ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ಚರ್ಚೆ ಮಾಡಲಾಗಿದೆ. ಬೆಂಗಳೂರು ನಗರಕ್ಕೆ, ಅದರಲ್ಲಿಯೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಹೇಳಿದ್ದಾರೆ.
ಕೇಂದ್ರವು ಕರ್ನಾಟಕದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವ ಕುರಿತು ಗಮನ ಹರಿಸಬೇಕು. ಕರ್ನಾಟಕಕ್ಕೆ ಸಂಬಂಧಿಸಿ ನಾನು ಮಂಜೂರು ಮಾಡಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಪ್ರಯಾಣಿಕರ ದಟ್ಟಣೆಯಿಂದ ವಿಪರೀತ ಒತ್ತಡ ಎದುರಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಇನ್ನೂ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಅವರ ಮಾತಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಮತ ವ್ಯಕ್ತಪಡಿಸಿದೆ. ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು, ಇದನ್ನು ನಾವೆಲ್ಲರೂ ಒಪ್ಪುತ್ತೇವೆ. ಸೂಕ್ತ ಸ್ಥಳ ಗುರುತಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಿದರೆ ಆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುತ್ತವೆ ಎಂದು ಭರವಸೆ ನೀಡಿದ್ದಾರೆ.