ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್, ಭಾರತದ ವಿರುದ್ಧ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಆಲ್‌ರೌಂಡ್ ಪ್ರದರ್ಶನದ ಮೂಲಕ ಇತಿಹಾಸದ ಪುಟಗಳಿಗೆ ಸೇರ್ಪಡೆಯಾಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಅವರು, ಕ್ರಿಕೆಟ್ ದಿಗ್ಗಜರಾದ ಗ್ಯಾರಿಫೀಲ್ಡ್ ಸೋಬರ್ಸ್ ಮತ್ತು ಜಾಕ್ ಕಾಲಿಸ್ ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಪಂದ್ಯದ ನಾಲ್ಕನೇ ದಿನವಾದ ಶನಿವಾರ, ಬೆನ್ ಸ್ಟೋಕ್ಸ್ ತಮ್ಮ 14ನೇ ಟೆಸ್ಟ್ ಶತಕವನ್ನು ಪೂರೈಸಿದರು. ಈ ಭರ್ಜರಿ ಇನಿಂಗ್ಸ್‌ನಲ್ಲೇ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 7000 ರನ್‌ಗಳ ಮೈಲಿಗಲ್ಲನ್ನೂ ದಾಟಿದರು. ಈ ಮೂಲಕ, ಟೆಸ್ಟ್ ಇತಿಹಾಸದಲ್ಲಿ 7000 ರನ್ ಮತ್ತು 200 ವಿಕೆಟ್‌ಗಳ ಡಬಲ್ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಅವರಿಗಿಂತ ಮೊದಲು ವೆಸ್ಟ್ ಇಂಡೀಸ್‌ನ ಸೋಬರ್ಸ್ ಮತ್ತು ದಕ್ಷಿಣ ಆಫ್ರಿಕಾದ ಕಾಲಿಸ್ ಮಾತ್ರ ಈ ಸಾಧನೆ ಮಾಡಿದ್ದರು.
ಇದೇ ಪಂದ್ಯದ ಎರಡನೇ ದಿನದಾಟದಲ್ಲಿ ಬೌಲಿಂಗ್‌ನಲ್ಲೂ ಮಿಂಚಿದ್ದ ಸ್ಟೋಕ್ಸ್, ಐದು ವಿಕೆಟ್ ಗೊಂಚಲು ಪಡೆದಿದ್ದರು. ಇದು 2017ರ ನಂತರ ಅವರು ಪಡೆದ ಮೊದಲ ಐದು ವಿಕೆಟ್ ಸಾಧನೆಯಾಗಿದೆ. ಒಂದೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ, ಐದು ವಿಕೆಟ್ ಪಡೆದ ವಿಶ್ವದ ಐದನೇ ನಾಯಕ ಎಂಬ ಅಪರೂಪದ ಗೌರವಕ್ಕೂ ಅವರು ಪಾತ್ರರಾದರು.
ಮೂರನೇ ದಿನದಾಟದಲ್ಲಿ ಜೋ ರೂಟ್ ಜೊತೆಗೂಡಿ ಐದನೇ ವಿಕೆಟ್‌ಗೆ 142 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ್ದ ಸ್ಟೋಕ್ಸ್, ನಂತರ ಸ್ನಾಯು ಸೆಳೆತದಿಂದಾಗಿ ಮೈದಾನದಿಂದ ಹೊರನಡೆದಿದ್ದರು. ಆದರೆ, ದಿನದ ಕೊನೆಯಲ್ಲಿ ಮರಳಿ ಬಂದು ಬ್ರೈಡನ್ ಕಾರ್ಸ್ ಜೊತೆಗೂಡಿ ಒಂಬತ್ತನೇ ವಿಕೆಟ್‌ಗೆ ಮತ್ತೊಂದು 95 ರನ್‌ಗಳ ಮಹತ್ವದ ಜೊತೆಯಾಟವನ್ನು ಆಡಿದರು.
ಅಂತಿಮವಾಗಿ, ರವೀಂದ್ರ ಜಡೇಜಾ ಅವರ ಬೌಲಿಂಗ್‌ನಲ್ಲಿ 198 ಎಸೆತಗಳಿಂದ 141 ರನ್ ಗಳಿಸಿ ಔಟಾದರು. ಅವರ ಈ ಇನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಸ್ಟೋಕ್ಸ್ ಅವರ ಈ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ 669 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ, 311 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಜೋ ರೂಟ್ (150), ಬೆನ್ ಡಕೆಟ್ (94), ಝಾಕ್ ಕ್ರಾಲಿ (84) ಮತ್ತು ಓಲ್ಲಿ ಪೋಪ್ (71) ಸಹ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ವಾಷಿಂಗ್ಟನ್ ಸುಂದರ್ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರು.