ಬೆಂಗಳೂರು: ಬಳ್ಳಾರಿಯಲ್ಲಿ ತಮ್ಮ ಮೇಲೆ ‘ಪೂರ್ವ ಯೋಜಿತ ಹತ್ಯೆ ಯತ್ನ’ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಜಿ.ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದು, ತಮಗೆ ತಕ್ಷಣವೇ ಝಡ್ ಶ್ರೇಣಿಯ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜನವರಿ 1 ರಂದು ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬ್ಯಾನರ್ ಅಳವಡಿಸುವ ವಿಚಾರವಾಗಿ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ ಘರ್ಷಣೆ ಭುಗಿಲೆದ್ದಿತ್ತು. ಈ ವಿಚಾರವನ್ನು ಉಲ್ಲೇಖಿಸಿರುವ ಅವರು, ‘ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ದೂರಿದ್ದಾರೆ.
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್ ಮ್ಯಾನ್ ನಡೆಸಿದ ಫೈರಿಂಗ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ ಇತರ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಝಡ್’ ಶ್ರೇಣಿಯ ಭದ್ರತೆಯನ್ನು ಕೋರಿ ಸಿಎಂಗೆ ಪತ್ರ
ಶನಿವಾರ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ಹೊಸ ವರ್ಷದ ದಿನದಂದು ತಮ್ಮ ಬಳ್ಳಾರಿ ನಿವಾಸದ ಮೇಲೆ ನಡೆದ ದಾಳಿ ‘ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ, ಬದಲಾಗಿ ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಸಹಚರರು ನಡೆಸಿದ್ದೆಂದು ಹೇಳಲಾದ ಪೂರ್ವ ಯೋಜಿತ ಮತ್ತು ವ್ಯವಸ್ಥಿತ ಹತ್ಯೆ ಯತ್ನ’ ಎಂದು ರೆಡ್ಡಿ ಹೇಳಿಕೊಂಡಿದ್ದಾರೆ. ಸ್ಥಳೀಯ ಪೊಲೀಸರ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ನೇರ ಆರೋಪ ಮಾಡಿರುವ ಅವರು, ತಮ್ಮ ಜೀವಕ್ಕೆ ಬೆದರಿಕೆ ‘ಸಾಧ್ಯವಾದಷ್ಟು ಗರಿಷ್ಠ ಮಟ್ಟ’ ತಲುಪಿದೆ ಎಂದು ದೂರಿದ್ದಾರೆ.

ರೆಡ್ಡಿ ತಮ್ಮ ಪತ್ರದಲ್ಲಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ‘ಝಡ್’ ಶ್ರೇಣಿಯ ಅಥವಾ ಅದಕ್ಕೆ ಸಮಾನವಾದ ಉನ್ನತ ಮಟ್ಟದ ಪೊಲೀಸ್ ಭದ್ರತೆಯನ್ನು ತಕ್ಷಣದಿಂದಲೇ ಒದಗಿಸಬೇಕು. ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಸಹಚರರ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸಬೇಕು ಮತ್ತು ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಈ ಘಟನೆಯನ್ನು ಕರ್ನಾಟಕದಲ್ಲಿ ‘ಜಂಗಲ್ ರಾಜ್’ನ ಸಾಕ್ಷಿ ಎಂದು ಕರೆದ ರೆಡ್ಡಿ, ಭದ್ರತೆಯ ಕೊರತೆಯಿಂದಾಗಿ ತನಗೆ ಅಥವಾ ತನ್ನ ಕುಟುಂಬಕ್ಕೆ ಹೆಚ್ಚಿನ ಹಾನಿ ಸಂಭವಿಸಿದರೆ, ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಭದ್ರತೆ ಒದಗಿಸುವಲ್ಲಿ ವಿಫಲ ಅಮಿತ್ ಶಾ ಪ್ರತ್ಯೇಕ ಮನವಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ ರೆಡ್ಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕೇಂದ್ರ ಪಡೆಗಳ ಮೂಲಕ ಭದ್ರತೆಯನ್ನು ಕೋರಿದ್ದಾರೆ. ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿ ಪರ ರಾಜ್ಯದಾದ್ಯಂತ ಪ್ರಚಾರ ಆರಂಭಿಸಿರುವುದು ಕಾಂಗ್ರೆಸ್ ನಾಯಕತ್ವವನ್ನು ಆತಂಕಕ್ಕೀಡು ಮಾಡಿದೆ ಎಂದು ಹೇಳಿದ್ದಾರೆ.
ಜನವರಿ 1 ರಂದು ನಡೆದ ಹಿಂಸಾತ್ಮಕ ಘರ್ಷಣೆಯ ನಂತರ, ಕೇಂದ್ರ ಸಚಿವ ವಿ ಸೋಮಣ್ಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ತಂಡವು ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಲು ಯೋಜಿಸಿದೆ.
ಇದನ್ನೂ ಓದಿ: ಅಸ್ಸಾಂ ಚುನಾವಣೆ ಸಮಿತಿಗೆ ಪ್ರಿಯಾಂಕಾ ಗಾಂಧಿ ನೇತೃತ್ವ | ಕರ್ನಾಟಕದ ನಾಯಕರಿಗೂ ಜವಾಬ್ದಾರಿ



















